- ಕಸ್ತೂರಿ ರಂಗನ್ ವರದಿ ಗಡಿ ಈಗಿರುವ ಅರಣ್ಯ ಪ್ರದೇಶಕ್ಕೆ ಸೀಮಿತವಾಗಿರಲಿ
- ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದನೆ
ಕೊಪ್ಪ, ಎನ್ ಆರ್ ಪುರ ಮತ್ತು ಶ್ರಿಂಗೇರಿ ತಾಲೂಕುಗಳನ್ನು ಒಳಗೊಂಡಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರೊಂದಿಗೆ ಆಗಸ್ಟ್ ಅಂತ್ಯದ ವೇಳೆಗೆ ಕುಂದುಕೊರತೆ ಸಭೆ ಆಯೋಜಿಸಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು” ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಭರವಸೆ ನೀಡಿದರು.
ಎದ್ದೇಳು ಕರ್ನಾಟಕ ಮಲೆನಾಡು ವತಿಯಿಂದ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿ ಭಾನುವಾರ ಆಯೋಜಿಸಿದ್ದ ‘ಜನ-ದನಿ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಮಲೆನಾಡು ಜನರ ಬದುಕಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಾದರೆ, ಈಗಾಗಲೇ ಘೋಷಣೆ ಆಗಿರುವ ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಸಂರಕ್ಷಿತಾರಣ್ಯಗಳಿಗೆ ಮಾತ್ರ ಗಡಿಯನ್ನು ಸೀಮಿತಗೊಳಿಸಬೇಕು. ಗಡಿ ವ್ಯಾಪ್ತಿಗೆ ಇಡೀ ಎಲ್ಲ ಜಾಗನ್ನು ಸೇರಿಸಬಾರದು ಎಂದು ಒತ್ತಾಯಿಸಿದರು.
“ಹಿಂದೆ ಮಾಧವ ಗಾಡ್ಗೀಳ್ ವರದಿ, ಹುಲಿ ಯೋಜನೆ ಮತ್ತು ಕಸ್ತೂರಿ ರಂಗನ್ ವರದಿ ವಿರುದ್ಧ ಹಳ್ಳಿಹಳ್ಳಿಗಳಲ್ಲಿ ಹೋರಾಟ ಸಭೆಗಳನ್ನು ಮಾಡಲಾಗಿತ್ತು. ಈ ಮಾಧವ ಗಾಡ್ಗೀಳ್ ವರದಿ ಬಹಳ ಕಠಿಣವಾದುದ್ದು, ಅದು ಜಾರಿಯಾದರೆ ಮಲೆನಾಡಿಗರ ಬದುಕನ್ನು ಕಿತ್ತುಕೊಂಡಹಾಗೆ ಎಂದು ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಬಳಿಕ ಗಾಡ್ಗೀಳ್ ವರದಿಯನ್ನು ಹಿಂಪಡೆದು ಕಸ್ತೂರಿ ರಂಗನ್ ವರದಿಗೆ ಚಾಲನೆ ಕೊಟ್ಟರು. ಹುಲಿ ಯೋಜನೆ ಈಗಾಗಾಲೆ ಜಾರಿಯಾಗಿದೆ” ಎಂದರು.
“ನಾವು ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಬದ್ಧ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿಕೆ ನೀಡಿದ್ದಾರೆ. ಅದು ಯಾವ ರೀತಿ ಹೇಳಿಕೆ ಕೊಟ್ಟರು ಎಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸಲಾಗುವುದು” ಎಂದು ಭರವಸೆ ನೀಡಿದರು.
“ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ಸೆಕ್ಷನ್ 4 ಎಂದು ಉದ್ಘೋಷಣೆ ಹೊರಡಿಸಿದೆ. ಈ ಬಗ್ಗೆಯೂ ಅಧಿವೇಶನದಲ್ಲಿ ಚರ್ಚಿಸಲು ಪ್ರಯತ್ನ ಮಾಡಿದೆ. ಅದರೆ, ಸಾಧ್ಯವಾಗಲಿಲ್ಲ. ಹಿಂದಿನ ಅಧಿವೇಶನಗಳಲ್ಲಿ ಹೆಚ್ಚು ಬಾರಿ ಈ ಬಗ್ಗೆ ಚರ್ಚೆ ಮಾಡಿದ್ದೆ. ಈ ಬಗ್ಗೆಯೂ ನಿಮ್ಮ ಜೊತೆಗೆ ನಿಲ್ಲುತ್ತೇನೆ” ಎಂದರು.
“ಫಾರಂ ನಂಬರ್- 50 ಮತ್ತು 53 ಅಡಿಯಲ್ಲಿ ಅಂದಾಜು ಐದೂವರೆ ಸಾವಿರ ಜನರಿಗೆ ಹಕ್ಕುಪತ್ರ ಕೊಡುವ ಕೆಲಸ ಆಗಿದೆ. ಹಿಂದಿನ ಡಿಎಫ್‌ಒ ಪರಿಸರ ಕಾಳಜಿ ಇತ್ತೇ ಹೊರತು ಜನರ ಜೀವದ ಮೇಲೆ ಸ್ವಲ್ಪವೂ ಕನಿಕರ ಇರಲಿಲ್ಲ. ಆ ಕಾರಣಕ್ಕಾಗಿಯೇ ಅವರ ವರ್ಗಾವಣೆ ಆಗಿದೆ. ಬೇರೆ ರಾಜ್ಯಗಳಿಂದ ಬರುವ ಅರಣ್ಯಾಧಿಕಾರಿಗಳಿಗೆ ಇಲ್ಲಿನ ಬದುಕು, ಕಾಡಿನ ಜೊತೆಗಿನ ಸಂಬಂಧದ ಬಗ್ಗೆ ಅರಿವು ಇರುವುದಿಲ್ಲ. 94 ಸಿ ಅಡಿಯಲ್ಲಿಯೂ ಸಾಕಷ್ಟು ಹಕ್ಕುಪತ್ರ ಕೊಡುತ್ತಿದ್ದೆವೆ. ಅರಣ್ಯ ಗಡಿಯಿಂದ ಹೊರಗೆ ಇರುವ ಪ್ರಕರಣಗಳಿಗೆ ಇನ್ನು ಎರಡು ಮೂರು ತಿಂಗಳ ಒಳಗೆ ಹಕ್ಕು ಪತ್ರ ಕೊಡಲಾಗುವುದು” ಎಂದು ಹೇಳಿದರು.

“ಅರಣ್ಯ ಹಕ್ಕು ಕಾಯ್ದೆ ಬಗ್ಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಹರಿಪ್ರಸಾದ್ ಎಲ್ಲರ ಬಳಿಯೂ ಮನವರಿಕೆ ಮಾಡಿದ್ದೇವೆ. ಅದರಲ್ಲಿಯೂ ಯಶಸ್ಸು ಸಿಗಲಿದೆ ಎಂಬ ನಂಬಿಕೆ ಇದೆ. ಬಹುತೇಕ ಕುದುರೆಮುಖದ ರಾಷ್ಟ್ರೀಯ ಉದ್ಯಾನದಲ್ಲಿ ವಾಸಿಸುವವರು. ಸೂಕ್ತ ಪರಿಹಾರ ಕೊಟ್ಟರೆ ಬಿಟ್ಟುಹೋಗುವುದಾಗಿ ಬೇಡಿಕೆ ಇಟ್ಟಿದ್ದಾರೆ.
ಸ್ವಯಂ ಪ್ರೇರಿತರಾಗಿ ಖಾಲಿ ಮಾಡುವವರಿಗೆ ನಾಲ್ಕು ಪಟ್ಟು ಪರಿಹಾರ ಕೊಡಬೇಕು. ಯಾವ ಅಧಿಕಾರಿಯೂ ಅಲ್ಲಿನ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಲು ಬಿಡುವುದಿಲ್ಲ” ಎಂದು ಭರವಸೆ ನೀಡಿದರು.
“ಪ್ರತಿ ಗ್ರಾಮಗಳಿಗೂ ಕಡ್ಡಾಯವಾಗಿ ಸ್ಮಶಾನ ಜಾಗ ಗುರುತಿಸಿ ಅಗತ್ಯ ಮೂಲ ಸೌಕರ್ಯವನ್ನು ನನ್ನ ಅವಧಿಯಲ್ಲಿ ಮಾಡುವೆ. ಅಗತ್ಯ ಇರವ ಕಡೆ ಚಿತಾಗಾರಗಳನ್ನು ಮಾಡಲಾಗುವುದು. ಅತಿವೃಷ್ಟಿಯಿಂದ ಆಗಿರುವ ಹಾನಿಯ ದುರಸ್ತಿಗೆ ಬದ್ಧ. ಅಗತ್ಯ ಇರುವ ಕಡೆ ಸೇತುವೆಗಳನ್ನು ನಿರ್ಮಾಣ ಮಾಡಲಾಗುವುದು. ಸಾರ್ವಜನಿಕ ರಸ್ತೆ ಬದಿ, ಗ್ರಾಮಗಳಲ್ಲಿ ಭೂ ಕುಸಿತ ಆಗಿರುವ ಕಡೆ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಆಗಸ್ಟ್ 15ರ ನಂತರ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು” ಎಂದು ಭರವಸೆ ನೀಡಿದರು.
‘ಅರಣ್ಯ ಕಾಯ್ದೆ, ಕಾನೂನು ಸುವ್ಯವಸ್ಥೆ ಕಾಡುತ್ತಿವೆ‘
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ಮಲೆನಾಡು ಸೌಂದರ್ಯ ಸೊಬಗಾಗಿ ಕಾಣಿಸುತ್ತದೆ ಆದರೆ, ಅಷ್ಟೇ ಸಮಸ್ಯೆಗಳು ಕಣ್ಣಮುಂದೆ ಕಾಣಿಸುತ್ತವೆ. ಮಲೆನಾಡು ಬೆಟ್ಟ ಗುಡ್ಡಗಳ ನಾಡು ಹಸಿರು ವನ ಮಲೆನಾಡಿನ ಗರ್ಭದೊಳಗೆ ನರಕಯಾತನೆ ಧ್ವನಿಯಾಗಿ ಕಾಣುತ್ತಿದೆ. ಶಿವಮೊಗ್ಗ, ಕೊಡುಗು, ಮೈಸೂರು ಇಂತಹ ಪ್ರಾಂತ್ಯದಲ್ಲಿ ಹೆಚ್ಚಾಗಿ ಅರಣ್ಯ ಕಾಯ್ದೆ ಕಾನೂನು ಸುವ್ಯವಸ್ಥೆ ಕಾಡುತ್ತಿದೆ” ಎಂದು ಹೇಳಿದರು.
“ಅರಣ್ಯ ವಲಯಗಳಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ಜನರು ವಾಸಿಸುತ್ತಿದ್ದಾರೆ. ಉಳ್ಳವರು ಬಂಡವಾಳ ಶಾಹಿಗಳ ಕೈ ಹಿಡಿತದಲ್ಲಿದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳು, ಬುಡಕಟ್ಟು ಜನಾಂಗದ ಪರಿಸ್ಥಿತಿ ಹದಗೆಡಲಿದೆ. ಪಾರಂ ನಂಬರ್ 50 – 53 ರಲ್ಲಿ ಬಗರ್ ಹುಕುಂ ಸಾಗುವಳಿ ಇಲ್ಲದವರಿಗೆ ಸರ್ಕಾರ ಭೂಮಿ ಕೊಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಚಳವಳಿ ನಡೆಸಬೇಕಾಗುತ್ತೆ” ಎಂದು ಎಚ್ಚರಿಕೆ ನೀಡಿದರು.

‘ತಲೆಮಾರುಗಳಿಂದಲೂ ಅರ್ಜಿ ಸಲ್ಲಿಸಲಾಗುತ್ತಿದೆ’
ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಮಾತನಾಡಿ, “ನಾನು ಚಿಕ್ಕನಿಂದಲೂ ನೋಡುತ್ತಾ ಬಂದಿದ್ದೀನಿ. ಅರ್ಜಿ ಕೊಡುವುದು ತಮಾಷೆ ವಿಷಯವಾಗಿದೆ. ಅರ್ಜಿ ಕೊಡುವುದಾದರೂ ಯಾರಿಗೆ ಕೊಡಬೇಕು? ದಲಿತರು, ಶೋಷಿತರು, ಬಡ ಜನರು, ಕೂಲಿ ಕಾರ್ಮಿಕರು ತಲೆಮಾರುಗಳಿಂದಲೂ ಅರ್ಜಿ ಕೊಡುತ್ತಲೇ ಇದ್ದಾರೆ. ಆದರೆ, ಇಲ್ಲಿಯವರೆಗೂ ಏನು ಪ್ರಯೋಜನ ಆಗಲಿಲ್ಲ. ಮಲೆನಾಡಿನಲ್ಲಿ ಕಾಡು ಪ್ರಾಣಿಗಳಿಂದ ಎಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ಪರಿಹಾರ ಸಿಕ್ಕಿಯೂ ಸಿಕ್ಕದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
’20 ವರ್ಷಗಳಿಂದ ಇವೇ ಸಮಸ್ಯೆ ಚರ್ಚೆಯಾಗುತ್ತಿವೆ’
ಪರಿಸರ ಪ್ರೇಮಿ, ಸಾಹಿತಿ ಕಲ್ಕುಳಿ ವಿಠಲ್ ಹೆಗ್ಡೆ ಮಾತನಾಡಿ, “ಕಳೆದ 20 ವರ್ಷಗಳಿಂದ ಇದೇ ಸಮಸ್ಯೆ ಚರ್ಚೆಗಳನ್ನು ಮಾಡುತ್ತಾ ಬಂದಿದ್ದೇವೆ. ಮಲೆನಾಡು ಭಾಗದಲ್ಲಿ ಸಮಸ್ಯೆಗಳು ವಿಭಿನ್ನವಾಗಿವೆ. ಸುಪ್ರೀಂ ಕೋರ್ಟಿನಲ್ಲಿ ಕೊಟ್ಟಿರುವ ತೀರ್ಪು ಜನಪರವಾಗಬೇಕು. ಅರಣ್ಯ ಕಾಯ್ದೆ, ಡಿ ನೋಟಿಫಿಕೇಶನ್ ನಿಂದ ಜನರು ತತ್ತರಿಸಿದ್ದಾರೆ. ಜಾಮೀನು ಮಂಜೂರು ಮಾಡಿದರೆ ಭೂಗಳ್ಳರೆಂದು ಕೇಸ್ ದಾಖಲಿಸುತ್ತಾರೆ. ಕಾಡು ಮಾತ್ರವೇ ಪರಿಸರ ಸಮತೋಲನ ಮಾಡುವಲ್ಲಿ ಏಕೈಕ ಮಾರ್ಗ ಎಂಬ ತಪ್ಪು ತಿಳುವಳಿಕೆ ನಮ್ಮಲ್ಲಿದೆ” ಎಂದರು.
“ಬೇಡಿಕೆ ಈಡೇರಿಸದಿದ್ದರೆ ಚಳವಳಿ’
ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, “ಈ ಸಮಾವೇಶ ಮುಂದಿನ ಮಲೆನಾಡು ಬದಲಾಗುವ ಸಮಾವೇಶ ಆಗಬೇಕು. ದೀಪದ ಕೆಳಗೆ ಕತ್ತಲಿರುತ್ತದೆ. ಸೌಂದರ್ಯದ ಗರ್ಭದಲ್ಲಿ ಸಹಸ್ರಾರು ಕ್ರೌರ್ಯ ತುಂಬಿದೆ. ಬೇಕಾದಷ್ಟು ಮಳೆ ಇದೆ, ಹಣ್ಣು ಹಂಪಲು ಇದೆ ಮತ್ತು ಹಂದಿಯನ್ನು ಹೊಡೆದು ತಿನ್ನುತ್ತಾರೆ ಅಂತಾರೆ. ಆದರೆ, ಇಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಬಗರ್ ಹುಕುಂ, ಅರಣ್ಯ ಕಾಯ್ದೆ, ಹುಲಿ ಯೋಜನೆ ಮುಂತಾದ ಸಮಸ್ಯೆಗಳ ವಿರುದ್ಧ ಎಲ್ಲರೂ ಸೇರಿ ಹೊರಡಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಚಳವಳಿ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
‘ದ್ವನಿ ಎತ್ತಿ ಮಾತನಾಡಬೇಕು’
ಎದ್ದೇಳು ಕರ್ನಾಟಕ ರಾಜ್ಯಧ್ಯಕ್ಷೆ ತಾರಾ ರಾವ್ ಮಾತನಾಡಿ, “ನಾವೆಲ್ಲರೂ ಮತ ಹಾಕಿ ಸರ್ಕಾರವನ್ನು ಬದಲಾಯಿಸಿದ್ದೇವೆ. ಅರ್ಜಿ ಕೊಡುವುದಲ್ಲ ಬದಲಾಗಿ ದ್ವನಿ ಎತ್ತಿ ಮಾತನಾಡಬೇಕು. ಮಲೆನಾಡಿನ ಜನರ ಪರಿವಾರವೇ ಹೋರಾಟ ಮಾಡಿದರೆ ಮಾತ್ರ ಸರ್ಕಾರಕ್ಕೆ ತಲುಪಲು ಸಾಧ್ಯ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬರಗೂರು ರಾಮಚಂದ್ರಪ್ಪ ವಿಧಾನಪರಿಷತ್ ಸದಸ್ಯರಾಗುವ ಕಾಲ ಕೂಡಿಬರಲಿ: ಕೆ ಎನ್ ರಾಜಣ್ಣ
ಜನ-ದನಿ ಸಮಾವೇಶದ ಅಧ್ಯಕ್ಷತೆಯನ್ನು ಗೌಸ್ ಮೊಹಿದ್ದೀನ್ ವಹಿಸಿದ್ದರು. ಸಮಾವೇಶದಲ್ಲಿ ಕಾಫಿ ಬೆಳೆಗಾರ ಎಂ ಎಸ್ ಚನ್ನಕೇಶವಗೌಡ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸಂಚಾಲಕ ಕುಮಾರ್ ಸಮತಳ, ರೈತ ಮುಖಂಡ ಸುರೇಶ್ ಭಟ್ ತೆಂಗಿನ ಕೊಂಡ, ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಿಯಪ್ಪ ಹಾಗೂ ಇತರರು ಇದ್ದರು.