ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಗುರುತಿಸಿ ನೀಡಲಾಗುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ರಾಜ್ಯ ಪ್ರಶಸ್ತಿ ಪಡೆದ ಮೈಸೂರಿನ ಸಾಧಕ ಪತ್ರಕರ್ತರಿಗೆ ಜಿಎಸ್ಎಸ್ ಸಮೂಹ ಸಂಸ್ಥೆಗಳ ವತಿಯಿಂದ ಆತ್ಮೀಯ ಸನ್ಮಾನ ನಡೆಯಿತು.
ಮೈಸೂರು ನಗರದ ಕುವೆಂಪುನಗರದಲ್ಲಿರುವ ಜಿಎಸ್ಎಸ್ ಸಮೂಹ ಸಂಸ್ಥೆಗಳ ಕಚೇರಿ ಆವರಣದಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಪತ್ರಕರ್ತರನ್ನು ಗೌರವಿಸಲಾಯಿತು. ರಾಜಕೀಯ ವಿಮರ್ಶೆ ವಿಭಾಗದಲ್ಲಿ ಖಾದ್ರಿ ಶಾಮಣ್ಣ ಪ್ರಶಸ್ತಿ ಪಡೆದ ದಯಾಶಂಕರ ಮೈಲಿ (ಸುದ್ದಿಮೂಲ), ಅತ್ಯುತ್ತಮ ಅಪರಾಧ ವರದಿ ವಿಭಾಗದಲ್ಲಿ ಗಿರಿಧರ್ ಪ್ರಶಸ್ತಿ ಪಡೆದ ಪಿ.ಕೆ. ರವಿಕುಮಾರ್ (ವಿಜಯವಾಣಿ), ವನ್ಯಜೀವಿ ವರದಿ ವಿಭಾಗದಲ್ಲಿ ಆರ್.ಎಲ್. ವಾಸುದೇವರಾವ್ ಪ್ರಶಸ್ತಿ ಪಡೆದ ನಾಗರಾಜ್ ನವೀಮನೆ (ವಿಜಯ ಕರ್ನಾಟಕ) ಹಾಗೂ ಅತ್ಯುತ್ತಮ ಪುಟ ವಿನ್ಯಾಸಗಾರ ಪ್ರಶಸ್ತಿ ಪಡೆದ ಸಂದೇಶ್ (ಪ್ರತಿನಿಧಿ) ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, “ಪತ್ರಕರ್ತರು ಸದಾ ಒತ್ತಡದ ನಡುವೆಯೇ ಕಾರ್ಯನಿರ್ವಹಿಸುತ್ತಾರೆ. ಅಂತಹ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸುವುದು ನಮಗೆ ನಾವೇ ಗೌರವ ನೀಡಿದಂತೆ. ಈ ರೀತಿಯ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಕೊಡಗಿನಲ್ಲಿ ಜನಗಣತಿ ಚುರುಕು: ‘ನಮ್ಮ ಗಣತಿ, ನಮ್ಮ ಅಭಿವೃದ್ಧಿ’ ಅಭಿಯಾನಕ್ಕೆ ವೇಗ
ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್ ಮಾತನಾಡಿ, “ಮೈಸೂರಿನ ಐವರು ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಪತ್ರಕರ್ತರ ಸಾಧನೆಗಳನ್ನು ಪರಿಚಯಿಸುವ ವೆಬ್ಸೈಟ್ ಆರಂಭಿಸುವ ಯೋಜನೆ ಹೊಂದಿದ್ದೇವೆ,” ಎಂದು ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, “ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುವುದು ಇಂದಿನ ಅವಶ್ಯಕತೆ. ಪತ್ರಕರ್ತರ ಏಳಿಗೆ ಹಾಗೂ ಸಂಘದ ಅಭಿವೃದ್ಧಿಗೆ ಶ್ರೀಹರಿ ಅವರು ನೀಡುತ್ತಿರುವ ಕೊಡುಗೆ ಶ್ಲಾಘನೀಯ,” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಾಗೃತ ಕರ್ನಾಟಕ ಸಂಘಟನೆಯಿಂದ ಯುವಜನರಿಗೆ ಏ.20ರಂದು ಭಾಷಣ–ಪ್ರಬಂಧ ಸ್ಪರ್ಧೆ
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಸಿ.ಕೆ. ಮಹೇಂದ್ರ, ಪ್ರಜಾವಾಣಿ ವರದಿಗಾರ ನರಸಿಂಹಮೂರ್ತಿ, ಬಿಟಿವಿ ವರದಿಗಾರ ಬಿ. ರಾಘವೇಂದ್ರ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ರಮೇಶ್ ಉತ್ತಪ್ಪ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ್, ರಾಜ್ಯಧರ್ಮ ಪತ್ರಿಕೆಯ ಸೋಮಶೇಖರ್, ಸಂಯುಕ್ತ ಕರ್ನಾಟಕದ ಬಸವರಾಜು, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಟಿವಿ9 ವರದಿಗಾರ ರಾಮ್, ವಿಶ್ವದೂತದ ಸುಬ್ರಹ್ಮಣ್ಯ, ನ್ಯೂಸ್ ಫಸ್ಟ್ ವರದಿಗಾರ ರವಿ ಪಾಂಡವಪುರ, ನ್ಯೂಸ್ 18 ವರದಿಗಾರ ಆನಂದ್ ಸೇರಿದಂತೆ ಇನ್ನಿತರರು ಇದ್ದರು.




