“ಅಮಾಯಕ ಯುವಕನ ಕೊಲೆಗೆ ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ, ಕೋಮು ಸಂಘರ್ಷ ಹುಟ್ಟು ಹಾಕುವಂತಹ ಘಟನೆಗಳು ಜಿಲ್ಲೆಯ ಜನರ ನೆಮ್ಮದಿಯನ್ನು ಹಾಳುಗೆಡಹಿದೆ. ಶಾಂತಿಯ ವಾತಾವರಣವನ್ನು ಕೆಡಿಸಿ, ಆ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರಗಳ ಭಾಗವಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಹಾಗಾಗಿ, ಕರಾವಳಿಯ ಜನರಿಗೆ ಗೌರವಯುತವಾಗಿ ಬದುಕುವ ಗ್ಯಾರಂಟಿ ಕೊಡಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಆಕ್ರೋಶ ಹೊರಹಾಕಿದ್ದಾರೆ.
ಬಂಟ್ವಾಳದ ಅಮಾಯಕ ಯುವಕ ಅಬ್ದುಲ್ ರಹಿಮಾನ್ ಕೊಲೆ ಘಟನೆ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಪ್ರತಿಯೊಂದು ಘಟನೆಗಳು ನಡೆದಾಗಲೂ ಅದನ್ನು ಸರಕಾರಕ್ಕೆ ತಲುಪಿಸುವಂಹ ಕೆಲಸ ನಡೆದರೂ ರಾಜ್ಯದ ಗೃಹ ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ. ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆಗಳು ಒಂದೂ ಈಡೇರಿಲ್ಲ. ಹಾಗಾಗಿ, ಇನ್ನಾದರೂ ಕರಾವಳಿಯ ಈ ನೆತ್ತರ ರಾಜಕೀಯ ಕೊನೆಯಾಗಬೇಕಿದೆ” ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರವು ವಿಶೇಷ ಗಮನಹರಿಸಲಿ: ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹ
“ಸರಕಾರ ದ್ವೇಷ ಭಾಷಣಕಾರರು ಮತ್ತು ಕೋಮು ಪ್ರಚೋದನೆ ಮಾಡುವ ದುಷ್ಟ ಶಕ್ತಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಿ ಇಲ್ಲಿನ ಜನರಿಗೆ ಮಿಕ್ಕ ಎಲ್ಲಾ ಗ್ಯಾರಂಟಿಗಳಿಗಿಂತ ಹೊರತಾಗಿ ಮೊದಲು ಗೌರವಯುತವಾಗಿ, ನೆಮ್ಮದಿಯಿಂದ ಬದುಕುವ ಗ್ಯಾರಂಟಿಯನ್ನು, ಶಾಂತಿಯುತ ವಾತಾವರಣವನ್ನು ನಿರ್ಮಿಸಿ ಕೊಡಬೇಕಿದೆ. ಈ ಕೊಲೆ ಕೃತ್ಯಗಳ ಮೂಲ ಪತ್ತೆ ಹಚ್ಚಿ, ಅದಕ್ಕೆ ಕುಮ್ಮಕ್ಕು ನೀಡುವಂತಹ ಶಕ್ತಿಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಕಾನೂನು ಶಿಕ್ಷೆ ಆಗಬೇಕು” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಒತ್ತಾಯಿಸಿದ್ದಾರೆ.
