ಸ್ನೇಹಿತನ ಸಂಬಂಧಿಕರ ಮನೆಗೆ ತೆರಳಿ ಊಟ ಮಾಡಿ ಬರುವಾಗ ಹಠಾತ್ ಕಾಣಿಸಿಕೊಂಡ ಆರೋಗ್ಯ ಏರುಪೇರು ಜೊತೆ ಎದೆನೋವು ತೀವ್ರಗೊಂಡು ಹೃದಯಾಘಾತಕ್ಕೆ ನವ ವಿವಾಹಿತ 23 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಗುಬ್ಬಿಯಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ಬಳಿ ತನ್ನ ಸ್ನೇಹಿತನ ಅಕ್ಕನ ಮನೆಗೆ ಊಟಕ್ಕೆ ಹೋಗಿ ಬರುವಾಗ ಹೃದಯಾಘಾತಕ್ಕೆ ಬಲಿಯಾದ 23 ವರ್ಷದ ಸಿದ್ದೇಶ್ ಗುಬ್ಬಿ ತಾಲ್ಲೂಕಿನ ಹೊಸಕೆರೆ ಸಮೀಪದ ಅರೇಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದೆ.
ಕೇವಲ 22 ದಿನಗಳ ಹಿಂದೆ ಪ್ರೀತಿಸಿ ಮದುವೆಯಾದ ಸಿದ್ದೇಶ್ ಪತ್ನಿ 19 ವರ್ಷದ ಯಶಸ್ವಿನಿ ರಕ್ತ ಸಂಬಂಧಿಗಳು ವಿರೋಧದ ನಡುವೆ ಸಿದ್ದೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈಗ ನತದೃಷ್ಟ ಯುವತಿ ಕಂಗಾಲಾಗಿದ್ದಾಳೆ.
ಕಳೆದ 22 ದಿನಗಳ ಹಿಂದೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ನಿಟ್ಟೂರು ಹೋಬಳಿಯ ಹಾರನಹಳ್ಳಿ ಗ್ರಾಮದ ಯಶಸ್ವಿನಿ ಹಾಗೂ ಹೊಸಕೆರೆ ಅರೇಹಳ್ಳಿ ಗ್ರಾಮದ ಮೃತ ಸಿದ್ದೇಶ ಪೊಲೀಸರ ಸಮ್ಮುಖದಲ್ಲಿ ಪ್ರೇಮ ವಿವಾಹ ಆಗಿದ್ದರು. ಸಂಬಂಧಿಕರ ವಿರೋಧದ ನಡುವೆ ಮದುವೆಯಾದ ನವ ಜೋಡಿಗಳಲ್ಲಿ ನವ ವರನ ಬಾಳಲ್ಲಿ ಯಮನಾಗಿ ಬಂದಿದ್ದು ಮಾತ್ರ ಹೃದಯಾಘಾತ. ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿರಿಸಿದ ಸಿದ್ದೇಶ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.
ಪ್ರಸ್ತುತ ದಿನಗಳಲ್ಲಿ ಹೃದಯಾಘಾತ ಬಹುಜನರ ಜೀವ ಪಡೆದ ಆಘಾತಕಾರಿ ವಿಚಾರವಾಗಿದೆ. ಹಾಸನ, ಮಡಿಕೇರಿ ಭಾಗದಲ್ಲಿ ಕಂಡ ಹೃದಯ ಸ್ತಂಭನ ಗುಬ್ಬಿ ತಾಲ್ಲೂಕಿನಲ್ಲಿ 23 ವರ್ಷದ ಯುವಕನ ಬಲಿ ಪಡೆದಿದ್ದು ತಾಲ್ಲೂಕಿನಲ್ಲಿ ಆತಂಕ ಮೂಡಿಸಿದೆ.