ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತ ಜನರು ಬಿಜೆಪಿ ಕರೆ ಕೊಟ್ಟಿರುವ ಮೇ 8 ರಂದು ತುಮಕೂರಿನಲ್ಲಿ ನಡೆಯುವ ಜನಾಕ್ರೋಶ ಪ್ರತಿಭಟನೆಗೆ ಪಕ್ಷಾತೀತವಾಗಿ ಭಾಗವಹಿಸಿ ತಮ್ಮ ಆಕ್ರೋಶ ಹೊರ ಹಾಕಲಿದ್ದಾರೆ. ಗುಬ್ಬಿ ತಾಲ್ಲೂಕಿನಿಂದ 5 ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಎಲ್ಲಾ ವಸ್ತುಗಳಿಗೆ ತೆರಿಗೆ ಅಧಿಕ ಗೊಳಿಸಿ ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟ ಎನ್ನುವ ಮಟ್ಟಕ್ಕೆ ದೂಡಿದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ನಡೆಸಲು ಸಾಮಾನ್ಯ ಜನರಿಗೆ ತೀವ್ರ ತೊಂದರೆ ಕೊಡುತ್ತಿದೆ. ತುಮಕೂರಿನ ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ಮೂಲಕ ಜನಾಕ್ರೋಶ ಪ್ರತಿಭಟನೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಜನಾಕ್ರೋಶ ಪಕ್ಷಾತೀತವಾಗಿ ಭಾಗವಹಿಸಲು ಸಾರ್ವಜನಿಕರಿಗೆ ಕರೆ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎತ್ತಿ ಹಿಡಿಯಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಚಾಮರಾಜನಗರದಿಂದ ಆರಂಭವಾದ ಜನಾಕ್ರೋಶ ಪ್ರತಿಭಟನಾ ಕಾರ್ಯಕ್ರಮ ಮೇ 8 ರಂದು ತುಮಕೂರಿನಲ್ಲಿ ನಡೆಯಲಿದೆ. ಮೇ 11 ರಂದು ಬೆಂಗಳೂರಿನಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯಲಿದೆ. ಅವೈಜ್ಞಾನಿಕ ಜಾತಿಗಣತಿ, ಬೆಲೆ ಏರಿಕೆ, ರೈತ ವಿರೋಧಿ, ದಲಿತ ವಿರೋಧಿ, ಹಿಂದೂ ಕಾರ್ಯಕರ್ತರ ಕಗ್ಗೊಲೆ ಹೀಗೆ ಅನೇಕ ವೈಫಲ್ಯವನ್ನು ಜನರ ಮುಂದೆ ಬಿಚ್ಚಿಡಲು ಜನಾಕ್ರೋಶ ಪ್ರತಿಭಟನೆ ತುಮಕೂರಿನಲ್ಲಿ ಜೋರಾಗಿ ನಡೆಯಲಿದೆ. ಎಲ್ಲಾ ನೊಂದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಈ ಜನಾಕ್ರೋಶ ಪ್ರತಿಭಟನೆಗೆ ಕೇಂದ್ರ ಸಚಿವ ಸೋಮಣ್ಣ, ಸಂಸದರಾದ ಗೋವಿಂದ ಕಾರಜೋಳ, ಡಾ.ಮಂಜುನಾಥ್, ಶಾಸಕರಾದ ಸುರೇಶಗೌಡ, ಜ್ಯೋತಿಗಣೇಶ್ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 10 ಕ್ಕೆ ಗುಬ್ಬಿ ತಾಲ್ಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದ ಅವರು ಪಾಕಿಸ್ತಾನದಲ್ಲಿ ಪ್ರಸಿದ್ಧರಾದ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಬೇಕಿಲ್ಲ. ಸಣ್ಣ ಸಮುದಾಯ ಒಡೆದು ಆಳುವ ನೀತಿ ಅನುಸರಿಸುವ ಸಿಎಂ ನಮಗೆ ಬೇಕಿಲ್ಲ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ ಗುಬ್ಬಿ ತಾಲ್ಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಜನಾಕ್ರೋಶ ಕಾರ್ಯಕ್ರಮಕ್ಕೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಜೊತೆಗೆ ಖಾಸಗಿ ವಾಹನಗಳಲ್ಲಿ ಜನರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತಮೋರ್ಚ ಜಿಲ್ಲಾಧ್ಯಕ್ಷ ಸಿದ್ದರಾಮಯ್ಯ, ಮುಖಂಡರಾದ ಕಾರೆಕುರ್ಚಿ ಸತೀಶ್, ಪಾರ್ಥಸಾರಥಿ, ಹುಚ್ಛವೀರೇಗೌಡ, ರಾಘವೇಂದ್ರ ಇತರರು ಇದ್ದರು.