ಸಮಾಜದಲ್ಲಿ ಗುರುತಿಸಿಕೊಂಡು ಬೆಳೆದ ನಂತರ ತಮ್ಮ ದುಡಿಮೆಯ ಒಂದಂಶ ಸಮಾಜದ ಸೇವೆ ಮುಡಿಪಾಗಿ ಇಡುವುದು ನಿಜವಾದ ಸೇವೆ. ಇದರಲ್ಲಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಶ್ಯ ಸೌಕರ್ಯ ಒದಗಿಸುವುದು ಪ್ರಸ್ತುತ ದಿನಗಳಲ್ಲಿ ಅರ್ಥಪೂರ್ಣ ಸೇವೆ ಎನಿಸಿಕೊಂಡಿದೆ ಎಂದು ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಕಳ್ಳಿಪಾಳ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನಿ ಸಾಮಾಗ್ರಿ ವಿತರಿಸಿ 64 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಕಳೆದ 25 ವರ್ಷದಿಂದ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಲ್ಲಿ ಹುಟ್ಟುಹಬ್ಬವನ್ನು ದುಂದುವೆಚ್ಚ ಮಾಡದೆ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪಾಠೋಪಕರಣ ವ್ಯವಸ್ಥೆ ಮಾಡುತ್ತಾ ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಓದುವ ಮಕ್ಕಳಿಗೆ ಅನುಕೂಲಗಳು ಸಿಗುತ್ತಿಲ್ಲ. ನಮ್ಮ ಬಾಲ್ಯದ ಜೀವನದಲ್ಲಿ ಈ ಸಂಕಷ್ಟ ಅನುಭವಿಸಿದ ಹಿನ್ನಲೆ ಇಂದು ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಶುಲ್ಕ ಭರಿಸುವುದು, ಉನ್ನತ ವ್ಯಾಸಂಗಕ್ಕೆ ಸಹಕಾರ ಹೀಗೆ ಹಲವು ಸತ್ಕಾರ್ಯ ಮಾಡುವ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಪರದಾಡುವ ಬಡವರಿಗೂ ಸಹಕಾರ ಮಾಡಿದ್ದೀನಿ. ಇಂತಹ ಸಂದರ್ಭದಲ್ಲಿ ಸಾರ್ಥಕ ಬದುಕು ಎಂಬ ಭಾವನೆ ಮನೆ ಮಾಡುತ್ತದೆ. ರಾಜಕೀಯ ಕ್ಷೇತ್ರಕ್ಕಿಂತ ಭಿನ್ನವಾಗಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಿನ್ನಲೆ ಜಾತ್ಯತೀತ ನಿಲುವು ಕಾಣುತ್ತಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಬದಿಯ ನಮ್ಮ ಗ್ರಾಮಕ್ಕೆ ಮೂಲಭೂತ ಸವಲತ್ತುಗಳ ತರಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಕೇಂದ್ರ ಸಚಿವ ಸೋಮಣ್ಣ ಅವರಿಂದ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಆಗಲಿದೆ. ರೈಲ್ವೆ ಅಂಡರ್ ಪಾಸ್ ಕೂಡಾ ಶೀಘ್ರದಲ್ಲಿ ನಿರ್ಮಾಣ ಆಗಲಿದೆ ಎಂದ ಅವರು ಹುಟ್ಟುಹಬ್ಬ ಆಚರಣೆ ಹಿನ್ನಲೆ ಅಡಗೂರು, ಪ್ರಭುವನಹಳ್ಳಿ, ಸಿಂಗೋನಹಳ್ಳಿ ಶಾಲಾ ಮಕ್ಕಳಿಗೆ ಪುಸ್ತಕಗಳು, ಲೇಖನಿ ಸಾಮಾಗ್ರಿ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಶಾಲಾ ಮಕ್ಕಳಿಗೆ ಹಂಚಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದಿಲೀಪ್ ಕುಮಾರ್, ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ, ಮುಖಂಡರಾದ ಯೋಗಾನಂದಕುಮಾರ್, ಎಂ.ಜಿ.ಶಿವಲಿಂಗಯ್ಯ, ವೀರಭದ್ರೇಗೌಡ, ವೆಂಕಟೇಶ್, ಶಂಕರೇಗೌಡ ಇತರರು ಇದ್ದರು.