ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಿ ಜಾತಿ ಪದ್ಧತಿಯಿಂದ ಹೊರತಾಗಿ ಸಮಾಜದಲ್ಲಿ ತುಳಿತಕ್ಕೆ ಒಳಗಾದವರು, ಶೋಷಿತರನ್ನು ಮುಖ್ಯವಾಹಿನಿಗೆ ತರುವ ಮೂಲಕ ಸಮಾನತೆ ಸಾಧಿಸುವ ನಿರಂತರ ತುಡಿತ ಡಾ.ಬಿ.ಆರ್.ಅಂಬೇಡ್ಕರ್ ಅವರಲ್ಲಿತ್ತು ಎಂದು ಪಿಡಿಒ ಕೃಷ್ಣಮೂರ್ತಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮದ ಅಂಬೇಡ್ಕರ್ ನಗರ ಬಡಾವಣೆಯಲ್ಲಿ ಯುವಕ ಸಂಘ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣ ಸಂಘಟನೆ ಹೋರಾಟ ಎಂಬ ತತ್ವ ಅಳವಡಿಸಿಕೊಂಡು ಬದುಕು ಸಾಧಿಸಲು ಪ್ರೇರಣೆ ನೀಡಿದ ಅಂಬೇಡ್ಕರ್ ಅವರು ದೀನ ದಲಿತರ ಉದ್ದಾರಕ್ಕೆ ಸದಾ ಕಾಲ ಚಿಂತನೆ ನಡೆಸಿದ್ದರು ಎಂದರು.
ದಲಿತ ಮುಖಂಡ ಕೋಟೆ ಕಲ್ಲೇಶ್ ಮಾತನಾಡಿ ಅಸ್ಪೃಶ್ಯತೆಯಿಂದ ಶತಮಾನಗಳಿಂದ ನಲುಗಿದ ಪರಿಶಿಷ್ಟ ಜಾತಿಯ ಜನಾಂಗಕ್ಕೆ ದಿಟ್ಟತನ ಪಾಠ ಮಾಡಿದ್ದ ಅಂಬೇಡ್ಕರ್ ಅವರು ನಿದ್ದೆಗೆಟ್ಟು ನನ್ನ ಜನ ಎಂದು ಸದಾ ಕಾಲ ದಲಿತರ ಏಳಿಗೆ ಬಗ್ಗೆ ಆಲೋಚಿಸಿದ್ದರು. ಶಿಕ್ಷಣ ಮೂಲಕ ಎಲ್ಲಾ ಅಸಮತೋಲನ ವಿರುದ್ಧ ದಿಟ್ಟವಾಗಿ ಬೆಳೆದು ಸಂವಿಧಾನ ರಚಿಸಿ ಎಲ್ಲಾ ವರ್ಗಕ್ಕೂ ಸಮಾನತೆ ತಂದರು. ಜೊತೆಯಲ್ಲಿ ಬಾಬು ಜಗಜೀವನರಾಂ ಅವರು ಸಹ ದಲಿತರ ಏಳಿಗೆಗೆ ದುಡಿದರು. ಹಸಿರು ಕ್ರಾಂತಿ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದರು.
ಗ್ರಾಪಂ ಸದಸ್ಯ ದಿಲೀಪ್ ಕುಮಾರ್ ಮಾತನಾಡಿ ಸ್ವಾತಂತ್ರ್ಯ ಬಂದ ನಂತರದಲ್ಲಿ ಪ್ರಜಾಪ್ರಭುತ್ವ ದೇಶ ಸ್ಥಾಪನೆಗೆ ಅವಶ್ಯ ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್ ಅವರ ತತ್ವಾದರ್ಶ ಯುವ ಪೀಳಿಗೆಗೆ ಮಾರ್ಗಸೂಚಿಯಾಗಿದೆ. ವಿಶ್ವ ಮೆಚ್ಚುವ ಸಂವಿಧಾನ ಎಲ್ಲಾ ವರ್ಗದ ಜನರಿಗೆ ಸಮಾನತೆ ಸಾರುವ ತಂದುಕೊಟ್ಟಿದೆ. ಅಂಬೇಡ್ಕರ್ ಅವರ ಮಾರ್ಗದರ್ಶನದಂತೆ ಮುಂದಿನ ಪೀಳಿಗೆ ಶಿಕ್ಷಣಕ್ಕೆ ಒತ್ತು ನೀಡಿ ದೇಶ ಕಟ್ಟಬೇಕು ಎಂದು ಕರೆ ನೀಡಿದರು.
ಮುಖಂಡರಾದ ಮಾದಣ್ಣ, ರಂಗಸ್ವಾಮಿ, ಪಾಂಡು, ಪ್ರಕಾಶ್, ಫಾರೆಸ್ಟ್ ರಂಗಯ್ಯ, ಬಸವರಾಜ್, ಪೂಜಾರ್ ರಾಜಣ್ಣ, ದೊಡ್ಡರಂಗಯ್ಯ, ಕಾಂತರಾಜು, ದೊಡ್ಡಯ್ಯ, ಕುಂಬಿ, ಕೆ.ರಂಗಸ್ವಾಮಿ, ಮಹೇಶ್, ಗೋವಿಂದರಾಜು, ನಾಗರಾಜ್, ಯೋಗೀಶ್ ಗ್ಯಾರೆಹಳ್ಳಿ, ತಾರಕೇಶ್, ಆಟೋ ಬಸವರಾಜ್, ವಿನಯ್, ನವೀನ್, ಶೇಖರ್, ಮಂಜುನಾಥ್, ಚನ್ನಪ್ಪ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದ್ದರು.