ಅಗ್ನಿವಂಶ ಕ್ಷತ್ರಿಯ ತಿಗಳ ವಿದ್ಯಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆಯ ಹಿನ್ನಲೆ ತಾಲ್ಲೂಕಿನಲ್ಲಿನ ಅತೀ ಹೆಚ್ಚು ಅಂಕ ಗಳಿಸಿದ ತಿಗಳ ಜನಾಂಗದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ ಹೆಚ್ಚಿನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಯಿತು.
ಗುಬ್ಬಿ ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ರಾಮಯ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ವಾರ್ಷಿಕ ಮಹಾಸಭೆಯ ದಿನದಂದು ನಮ್ಮ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವ ಕೆಲಸ ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದೇವೆ. ಹಿಂದುಳಿದ ವರ್ಗದ ಅಗ್ನಿವಂಶ ತಿಗಳ ಜನಾಂಗ ಕೃಷಿ ನಂಬಿ ಬದುಕು ಕಟ್ಟಿಕೊಂಡಿದೆ. ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರುವಲ್ಲಿ ಹಿಂದುಳಿದ ನಮಗೆ ಶಿಕ್ಷಣ ಅತ್ಯಗತ್ಯ ಎಂಬ ಜಾಗೃತಿ ಮೂಡಿದ ನಂತರದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಕೆಲಸ ಸಂಘ ಮಾಡಿದೆ. ಬಡ ಪ್ರತಿಭಾವಂತ ಮಕ್ಕಳಿಗೆ ಎಲ್ಲಾ ರೀತಿಯ ಸಹಕಾರ ಒದಗಿಸಿ ಶೈಕ್ಷಣಿಕ ಸೇವೆ ಕೂಡಾ ಸಂಘ ನಡೆಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಗೌರವಾಧ್ಯಕ್ಷ ಎಸ್.ನಂಜೇಗೌಡ ಮಾತನಾಡಿ ಕೇವಲ ತೋಟಗಾರಿಕೆ ನಂಬಿ ಜೀವನ ಸಾಗಿಸಿದ ತಿಗಳ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ಇರಲಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡು ಮುಖ್ಯವಾಹಿನಿಗೆ ಬರಲು ಸಂಘಟನೆಯ ಅವಶ್ಯವಿತ್ತು. ಅಂತಹ ಸಮಯದಲ್ಲಿ ಈ ವಿದ್ಯಾಭಿವೃದ್ದಿ ಸಂಘ ಅಸ್ತಿತ್ವಕ್ಕೆ ಬಂತು. ನಂತರದಲ್ಲಿ ನಮ್ಮ ಸಮಾಜದ ಮಕ್ಕಳು ಶಿಕ್ಷಣದತ್ತ ಸಾಗಿದರು ಎಂದರು.
ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಿಎಚ್ ಡಿ ಪದವೀಧರ ಲಕ್ಷ್ಮೀರಂಗನಾಥ್ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ, ಎಡಿಎಲ್ ಆರ್ ತಿಮ್ಮಯ್ಯ, ಸಂಘದ ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಖಜಾಂಚಿ ಸಣ್ಣರಂಗಯ್ಯ, ಉಪಾಧ್ಯಕ್ಷ ಶಿವಣ್ಣ, ಜಂಟಿ ಕಾರ್ಯದರ್ಶಿ ಜಿ.ಬಿ.ನಾಗರಾಜು, ನಿರ್ದೇಶಕರಾದ ಲೋಕೇಶ್ ಬಾಬು, ಯೋಗಾನಂದಕುಮಾರ್, ಅರ್ಜುನಪ್ಪ, ಸಿ.ಯು.ರಾಜಣ್ಣ ಸೇರಿದಂತೆ ತಾಲ್ಲೂಕಿನ ತಿಗಳ ಜನಾಂಗದ ಮುಖಂಡರು ಭಾಗವಹಿಸಿದ್ದರು.
