ಇಂದಿನ ಯುವ ಸಮುದಾಯ ಶಿಕ್ಷಣದ ಜೊತೆಗೆ ಸಾಮಾಜಿಕ, ಧಾರ್ಮಿಕ ಕಳಕಳಿ ಹೊಂದಿದಾಗ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಮುರಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಸ್ವಾಮಿ ನೂತನ ದೇವಾಲಯದ ಉದ್ಘಾಟನೆ ಹಾಗೂ ಕಲಶರೋಹಣ ಧ್ವಜಸ್ತಂಬ ಪ್ರತಿಷ್ಠಾಪನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಮ್ಮೆದೊಡ್ಡಿ ಹಾಗೂ ಸುತ್ತಮುತ್ತಲಿನ 18 ಗ್ರಾಮಗಳ ಜನರು ಇಷ್ಟು ದೊಡ್ಡ ಧಾರ್ಮಿಕ ಕಾರ್ಯವನ್ನು ಹಮ್ಮಿಕೊಂಡು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿನ ಯುವಕರು ತುಮಕೂರು ಬೆಂಗಳೂರಿನಂತಹ ನಗರಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿ ಹತ್ತು ಹದಿನೈದು ಸಾವಿರ ರೂ.ಗಳಿಗೆ ಕೆಲಸ ಮಾಡುತ್ತಿದ್ದಾರೆ. ಗ್ರಾಮಗಳು ವೃದ್ಧರ ತಾಣಗಳಾಗಿವೆ. ಗ್ರಾಮದಲ್ಲಿನ ಯುವಕರಿಗೆ ಹಾಗೂ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಗಳಿದ್ದರೆ ನನ್ನ ಹಾಗೂ ಹನುಮಂತನಾಥ ಶ್ರೀಗಳವರನ್ನು ಭೇಟಿ ಮಾಡಿ, ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿ, ಗ್ರಾಮಸ್ಥರಿಗೆ ಶುಭ ಕೋರಿದರು.
ಕೊರಟಗೆರೆ ಎಲೆರಾಂಪುರ ಕುಂಚಿಟಿಗರ ಸಂಸ್ಥಾನಮಠದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಪ್ರತಿ ಗ್ರಾಮದಲ್ಲಿ ದೇವಾಲಯಗಳು, ಶಾಲೆಗಳ ಅಭಿವೃದ್ಧಿಗೆ ಗ್ರಾಮಸ್ಥರು ಮುಂದಾಗಬೇಕು. ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಿದಾಗ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮೂಡುತ್ತದೆ ಎಂದು ನುಡಿದರು.
ನಮ್ಮ ಬದುಕಿಗೆ ಅರ್ಥ ನೀಡುವ, ನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ತೆರೆದಿಡುವ, ಮನಸ್ಸು ದೇಹಕ್ಕೆ ಮುದನೀಡುವ ಆಚರಣೆಗಳೆಲ್ಲವನ್ನೂ ನಾವು ಆಚರಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಎಮ್ಮೆದೊಡ್ಡಿ ಗ್ರಾಮವೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಹಿಳೆಯರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಕಾರ್ಯಕ್ರಮದಲ್ಲಿ ಕುಂಚಿಟಿಗರ ತಾಲೂಕು ಸಂಘದ ಅಧ್ಯಕ್ಷ ವೈ.ಜಿ. ಜಯಣ್ಣ, ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದರಪ್ಪ, ಮುಖಂಡರಾದ ವೀರಯ್ಯ, ಮಂಜಣ್ಣ, ಲೋಕೇಶ್, ಮಂಜುನಾಥ್ ವೈ ಜಿ ರಘು, ರಾಜಣ್ಣ, ಮನು ಸೇರಿದಂತೆ ಮುಖಂಡರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.