ಕಳೆದ ಹದಿನೈದು ದಿನದಿಂದ ಶೀತ ಜ್ವರ ನಂತರ ದೀರ್ಘಾವಧಿ ಕೆಮ್ಮುವ ರೋಗಿಗಳ ಸಂಖ್ಯೆ ಉಲ್ಬಣವಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಂದೆ ಸಾಲು ಸರದಿಯಲ್ಲಿ ಕುಳಿತ ರೋಗಿಗಳ ಸಂಖ್ಯೆ ಕೂಡಾ ಅಧಿಕವಾಗಿ ವೈದ್ಯರು ಪುರುಸೊತ್ತಿಲ್ಲದೆ ಚಿಕಿತ್ಸೆಯಲ್ಲಿ ತೊಡಗಿರುವ ದೃಶ್ಯ ಕಾಣುತ್ತಿದೆ.
ವಾತಾವರಣ ಬದಲಾವಣೆ ಒಮ್ಮೆ ಮಳೆ, ಬಿಸಿಲು ಕಾಣಿಸುವ ಈ ಹವಾಮಾನದಲ್ಲಿ ಕಾಣುವ ಈ ವೈರಲ್ ಫೀವರ್ ಬಹುಬೇಗ ಹರಡುತ್ತದೆ. ನೆಗಡಿಯಿಂದ ಆರಂಭವಾಗಿ ಕಫ, ಜ್ವರ, ಮೈಕೈ ನೋವು ಹೆಚ್ಚಾಗಿ ಮೂರರಿಂದ ಐದು ದಿನಗಳ ಕಾಲ ಮಲಗಿಸುತ್ತಿದೆ. ಈ ಸಾಂಕ್ರಾಮಿಕ ವೈರಾಣು ಶೀತ ಸೀನುವಿಕೆಯಿಂದ ಬೇಗ ಹರಡುತ್ತದೆ. ಕೋವಿಡ್ ಭೀತಿ ಇರುವ ಈ ಸಮಯದಲ್ಲಿ ವೈರಲ್ ಫೀವರ್ ಮತ್ತಷ್ಟು ಭಯ ತಂದಿರುವುದಂತೂ ಸತ್ಯ.
ಗುಬ್ಬಿ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಗಳಲ್ಲಿ ನಿತ್ಯ ಇರುತ್ತಿದ್ದ ಹೊರ ರೋಗಿಗಳ ಸಂಖ್ಯೆ ಶೇಕಡಾ 20 ರಷ್ಟು ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ ಸಹ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ವೈರಲ್ ಫೀವರ್ ಹೆಸರಿಗೆ ತಕ್ಕಂತೆ ಬೇಗ ಹರಡುತ್ತಿರುವ ಈ ಸಮಯದಲ್ಲಿ ರೋಗಿಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಸೂಕ್ತ. ಮಾಸ್ಕ್ ಬಳಕೆ, ಶೀತ ಕಾಣಿಸಿಕೊಂಡ ತಕ್ಷಣ ತಾವೇ ವೈದ್ಯಕೀಯ ನಡೆಸದೆ ನೇರ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಸುದೀರ್ಘ ಕಾಲ ಕಾಣುವ ಕೆಮ್ಮು ಬಗ್ಗೆ ಎಚ್ಚರವಹಿಸಬೇಕು. ಒಣ ಕೆಮ್ಮು ಇದ್ದಲ್ಲಿ ಸೂಕ್ತ ಔಶಧೋಪಚಾರ ಅಗತ್ಯ. ಬಿಸಿ ನೀರು ಕುಡಿಯುವುದು, ಶೀತ ಪದಾರ್ಥ ಸೇವಿಸದೆ ಬಿಸಿ ಆಹಾರ ತಿನ್ನುವುದು ಇದಕ್ಕೆ ಮದ್ದು. ಕೆಮ್ಮು ಜೊತೆ ಕಫ ಇದ್ದಲ್ಲಿ ಖಂಡಿತಾ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಸೂಕ್ತ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ಸೂಚಿಸುತ್ತಿದೆ.
“ಮಳೆಗಾಲದ ಈ ಸಂದರ್ಭದಲ್ಲಿ ವೈರಲ್ ಫೀವರ್ ಹರಡುವಿಕೆ ಕಾಣಸಿಗುತ್ತದೆ. ನೆಗಡಿಯಿಂದ ಆರಂಭವಾಗಿ ಜ್ವರ ಬರುತ್ತದೆ. ಜ್ವರ ಬಿಟ್ಟರೂ ಕೆಮ್ಮು ನಿರಂತರ ಕಾಣುತ್ತದೆ. ವೈರಾಣು ಕಾಟಕ್ಕೆ ನಿತ್ಯ ಹೊರ ರೋಗಿಗಳ ಸಂಖ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಶೇಕಡಾ 10 ರಷ್ಟು ಹೆಚ್ಚಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಅಲರ್ಜಿ ಮೂಲಕ ಹರಡುವ ಈ ವೈರಾಣು ಗಾಳಿ, ನೀರು ಹಾಗೂ ಧೂಳು ಅಲರ್ಜಿ ಎನಿಸುತ್ತದೆ. ಸಾಂಕ್ರಾಮಿಕ ವೈರಾಣು ಹರದಂತೆ ಎಚ್ಚರಿಕೆ ಕ್ರಮ ಮಾಸ್ಕ್ ಬಳಕೆ ಉತ್ತಮ ಹಾಗೂ ಸೂಕ್ತ ಚಿಕಿತ್ಸೆ, ಬಿಸಿ ಆಹಾರ, ನೀರು ಬಳಕೆ, ನಿರಂತರ ಕೆಮ್ಮು ಇದ್ದಲ್ಲಿ ವೈದ್ಯರ ಭೇಟಿ ಉತ್ತಮ” ಎಂದು ಗುಬ್ಬಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ತಿಳಿಸಿದ್ದಾರೆ.
