ಸವಿತಾ ಸಮಾಜದ ತಾಲ್ಲೂಕು ಆಡಳಿತ ಮಂಡಳಿ ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷರಾಗಿ ಡಿ.ವಿ.ಲಕ್ಷ್ಮೀನಾರಾಯಣ್ (ಪಾಪಣ್ಣ) ಹಾಗೂ ತಾಲ್ಲೂಕು ಪ್ರತಿನಿಧಿಯಾಗಿ ಎನ್.ರಮೇಶ್ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಗುಬ್ಬಿ ಪಟ್ಟಣದ ಸವಿತಾ ಸಮಾಜದ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಹೊಸ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಡೆಸಿ ಎಲ್ಲಾ ಹೋಬಳಿ ಘಟಕದ ಅಧ್ಯಕ್ಷರ ಸಮ್ಮುಖದಲ್ಲಿ ಸಮಾಜದ ಆಗುಹೋಗುಗಳ ಬಗ್ಗೆ ಕೂಲಂಕಷ ಚರ್ಚೆ ಮಾಡಲಾಯಿತು.
ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಪಾಪಣ್ಣ ಮಾತನಾಡಿ ಹಿಂದುಳಿದ ವರ್ಗಗಳ ಪೈಕಿ ಅತೀ ಹಿಂದುಳಿದ ನಮ್ಮ ಸಮಾಜದ ಎಲ್ಲಾ ಬಂಧುಗಳು ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಈ ಹಿಂದೆ ನಮ್ಮ ಸಮಾಜದ ಬಂಧುಗಳು ಯಾರಾದರೂ ಮೃತಪಟ್ಟರೆ ಆ ಕುಟುಂಬಕ್ಕೆ ನಾನು ವೈಯಕ್ತಿಕ ರೂ.2500 ನೀಡುವ ಪದ್ಧತಿ ನಡೆಸಿಕೊಂಡು ಬಂದಿದ್ದೆ. ಆದರೆ ಈ ಕೊಡುಗೆಯ ಹೆಸರು ಬೇರೆಯವರು ಪಡೆಯುವ ವಿಚಾರ ಕೇಳಿ ಬೇಸರಗೊಂಡು ಸಹಾಯ ಸ್ಥಗಿತಗೊಳಿಸಿದ್ದೆ. ಈಗ ಅಧ್ಯಕ್ಷನಾಗಿ ಮರು ಗಳಿಗೆಯಲ್ಲೇ ಮೃತ ಕುಟುಂಬಕ್ಕೆ ಧನ ಸಹಾಯ ಪದ್ಧತಿ ನಾನು ಮುಂದುವರೆಸುತ್ತೇನೆ. ಜೊತೆಗೆ ಪ್ರತಿ ಎರಡು ತಿಂಗಳಿಗೊಮ್ಮೆ ಹೋಬಳಿ ಮಟ್ಟದ ಸಭೆ ನಡೆಸಿ ಕುಂದು ಕೊರತೆಗಳ ಆಲಿಸಲಾಗುವುದು ಎಂದು ಭರವಸೆ ನೀಡಿದರು.

ಸವಿತಾ ಸಮಾಜ ಯುವಪಡೆ ಜಿಲ್ಲಾಧ್ಯಕ್ಷ ಕಟ್ ವೆಲ್ ರಂಗನಾಥ್ ಮಾತನಾಡಿ ತಾಲ್ಲೂಕು ಮಟ್ಟದ ಸಂಘ ನಮ್ಮ ಜನಾಂಗದ ಕಷ್ಟ ಸುಖ ಆಲಿಸುವ ಕೆಲಸ ಮಾಡಬೇಕು. ತ್ಯಾಗರಾಜ ಭವನ, ಸವಿತಾ ಭವನ ಹೀಗೆ ಸಮಾಜದ ಅಭಿವೃದ್ದಿ ಜೊತೆಗೆ ಪ್ರತಿಭಾವಂತ ಮಕ್ಕಳಿಗೆ ಸಹಕಾರ, ಅನಾರೋಗ್ಯ ಪೀಡಿತರಿಗೆ ಸಹಾಯ ಈ ರೀತಿಯ ಸಮಾಜಮುಖಿ ಕೆಲಸಗಳು ಮುಂದೆ ಪಾಪಣ್ಣ ನಡೆಸುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಸವಿತಾ ಸಮಾಜ ಜಿಲ್ಲಾ ಪ್ರತಿನಿಧಿ ಕೆ.ವಿ.ನಾರಾಯಣ್ ಮಾತನಾಡಿ ಸರ್ಕಾರದಿಂದ ಅಗತ್ಯ ಸಹಾಯ ಪಡೆಯಲು ಒಗ್ಗಟ್ಟಿನ ಅಗತ್ಯವಿದೆ. ಸಮಾಜದಲ್ಲಿ ನಮ್ಮ ಉಳಿವಿಗೆ ಸಂಘಟನೆ ಕೂಡಾ ಮುಖ್ಯವಾಗಿದೆ. ಸಾಮಾಜಿಕವಾಗಿ ಹಿಂದುಳಿದ ನಾವುಗಳು ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಮಾಜ ಕಟ್ಟೋಣ ಎಂದು ಕರೆ ನೀಡಿದರು.
ನೂತನ ತಾಲ್ಲೂಕು ಪ್ರತಿನಿಧಿ ಎನ್.ರಮೇಶ್ ಮಾತನಾಡಿ ಹಿಂದುಳಿದ ನಮ್ಮ ಜನಾಂಗವನ್ನು ಮುಖ್ಯವಾಹಿನಿಗೆ ತರಲು ನಮ್ಮ ಕುಲ ಕಸುಬು ಹೊರತಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಬೇರೆ ರಂಗಗಳಲ್ಲಿ ಬೇರೂರುವ ಕೆಲಸ ಸಂಘಟನೆಯಲ್ಲಿ ಮಾಡಬೇಕಿದೆ. ರಾಜಕೀಯ ಶಕ್ತಿ ಕೂಡ ನಮಗೆ ಅತ್ಯಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಹೋಬಳಿ ಮಟ್ಟದ ಘಟಕಗಳು ನೇರ ತಾಲ್ಲೂಕು ಅಧ್ಯಕ್ಷರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ ಸವಿತಾ ಸಮಾಜದ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ನೂತನ ಅಧ್ಯಕ್ಷರ ಆಯ್ಕೆಗೆ ಸಮಾಜದ ಬಂಧುಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಮುಕುಂದರಾಜ್, ನಟರಾಜ್, ಮಾಜಿ ಪ್ರತಿನಿಧಿ ನರಸಿಂಹಮೂರ್ತಿ, ಕಡಬ ಅಧ್ಯಕ್ಷ ಗೋಪಾಲ್, ನಿಟ್ಟೂರು ಅಧ್ಯಕ್ಷ ಕರಿಯಣ್ಣ, ಹಾಗಲವಾಡಿ ಅಧ್ಯಕ್ಷ ಲೋಕೇಶ್, ಚೇಳೂರು ಅಧ್ಯಕ್ಷ ಗಿರೀಶ್ ಹಾಗೂ ಸಿ.ಎಸ್.ಪುರ ಅಧ್ಯಕ್ಷ ವಸಂತಕುಮಾರ್ ಇತರರು ಇದ್ದರು.
