ಸರ್ಕಾರ ದಲಿತರ ಅಭಿವೃದ್ಧಿಗೆ ಹಲವು ಇಲಾಖೆಯ ಮೂಲಕ ಸಬ್ಸಿಡಿ ಹಾಗೂ ಉಚಿತ ಸೌಲಭ್ಯ ಒದಗಿಸುತ್ತದೆ. ಆದರೆ ವಾಸ್ತವದಲ್ಲಿ ಇತರರು ಗ್ರಾಮೀಣ ಮುಗ್ಧ ದಲಿತರ ಪಹಣಿ ಬಳಸಿ ಉಚಿತ ಹಾಗೂ ಸಬ್ಸಿಡಿ ಸೌಲಭ್ಯ ಪಡೆದುಕೊಳ್ಳುವ ಬಗ್ಗೆ ದಲಿತ ಮುಖಂಡರು ನಿಗಾ ವಹಿಸಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಕಿವಿ ಮಾತು ಹೇಳಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರ ನೀಡುವ ಯೋಜನೆ, ಕಾರ್ಯಕ್ರಮ ಬಗ್ಗೆ ಮಾಹಿತಿ ತಿಳಿಯದ ಗ್ರಾಮೀಣ ದಲಿತರಿಗೆ ಮಾಹಿತಿ ಒದಗಿಸಿ ಅನುಕೂಲ ಮಾಡಿಕೊಡುವ ಕೆಲಸ ಮುಖಂಡರು ಮಾಡಬೇಕು. ಬಡ ದಲಿತರ ಏಳಿಗೆಗೆ ಶ್ರಮಿಸುವ ಕೆಲಸಕ್ಕೆ ಯಾವ ಸಮಯದಲ್ಲಿ ಬಂದರೂ ನಾನು ಸಿದ್ದನಿರುತ್ತೇನೆ ಎಂದು ಕರೆ ನೀಡಿದರು.
ಪೊಲೀಸರು ದಲಿತರ ದೂರು ಬಂದಲ್ಲಿ ತಾರತಮ್ಯ ಮಾಡುತ್ತಾರೆ ಎಂಬ ವಿಚಾರದಿಂದ ಸಭೆ ಆರಂಭವಾಯಿತು. ನಂತರ ಹೋಬಳಿವಾರು ಕೆಲ ಇಲಾಖಾಧಿಕಾರಿಗಳು ಜನರಿಗೆ ಸಿಗುತ್ತಿಲ್ಲ ಎಂಬ ದೂರು ಕೇಳಿಬಂತು. ತಕ್ಷಣ ಶಾಸಕರು ಹೋಬಳಿ ಮಟ್ಟದ ಅಧಿಕಾರಿಗಳು ಆಯಾ ಕಚೇರಿಯಲ್ಲಿ ಬೆಳಿಗ್ಗೆ ಸಮಯದಲ್ಲಿ ನಿಗದಿತವಾಗಿ ಸಾರ್ವಜನಿಕರ ಅಹವಾಲು ನೋಡಬೇಕು ಎಂದು ಸೂಚಿಸಿದರು. ಸರ್ಕಾರದ ದಲಿತ ಪರ ಯೋಜನೆಗಳ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಿಸಿ ಮಾಧ್ಯಮ ಮೂಲಕ ಜಾಹೀರಾತು ನೀಡಲು ಕೆಲ ಇಲಾಖೆಗೆ ಸಲಹೆ ನೀಡಿದರು.
ರಸ್ತೆ ಒತ್ತುವರಿ, ಗೋಮಾಳ ಹಕ್ಕುಪತ್ರ, ವಿದ್ಯುತ್ ಟಿಸಿ ಅಳವಡಿಕೆ, ಜಮೀನು ವಿವಾದ ಹೀಗೆ ಹಲವು ವಿಚಾರ ಅರ್ಜೀವಾರು ಚರ್ಚೆ ನಡೆಸಲಾಯಿತು. ಈ ಮಧ್ಯೆ ರಸ್ತೆ ಬದಿ ಉಳುಮೆ ಮಾಡುವವರ ವಿರುದ್ಧ ಕ್ರಮಕ್ಕೆ ಇಂಜಿನಿಯರ್ ಗಳಿಗೆ ತಿಳಿಸಿದರು. ದಲಿತ ಮಕ್ಕಳ ಶಿಕ್ಷಣಕ್ಕೆ ಗ್ರಾಮ ಪಂಚಾಯಿತಿ ಮೂಲಕ ಆರ್ಥಿಕ ನೆರವು ನೀಡಲು ಕೆಲ ಕಾರ್ಯಕ್ರಮ ಹಣ ಬಳಕೆ ಮಾಡಲಾಗುತ್ತಿದೆ. ಶಿಕ್ಷಣಕ್ಕೆ ಮೊದಲ ಆದ್ಯತೆ ಮೇರೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮೀಸಲು ಹಣ ಬಳಕೆ ಮಾಡಲಾಗಿದೆ ಎಂದರು.
ಸರ್ಕಾರದ ಸಾಲ ಸೌಲಭ್ಯ ಒದಗಿಸುವ ಬ್ಯಾಂಕ್ ಅಧಿಕಾರಿಗಳ ನಡವಳಿಕೆ ಬಗ್ಗೆ ಸುಧೀರ್ಘ ಚರ್ಚೆ ನಡೆದು ಎಲ್ಲಾ ದಾಖಲಾತಿ ಪಡೆದು ಕೊನೆಯಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಬಂದಿಲ್ಲ ಎನ್ನುತ್ತಾರೆ. ಇದು ಖಂಡನೀಯ ಎಂದು ಮುಖಂಡರು ಒಕ್ಕೊರಲಿನ ಖಂಡನೆ ವ್ಯಕ್ತ ಪಡಿಸಿದರು. ನಂತರ ಉತ್ತರಿಸಿದ ಶಾಸಕರು ಈ ಗಂಭೀರ ಸಮಸ್ಯೆ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಶೀಘ್ರದಲ್ಲಿ ಲೀಡ್ ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸುವ ಭರವಸೆ ನೀಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಬೇಡಿಕೆ ಬಗ್ಗೆ, ಪಂಚಾಯಿತಿ ಖಾತೆ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು. ನಂತರ ತಾಲ್ಲೂಕು ಕಚೇರಿ ಮುಂದೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಒಕ್ಕೊರಲಿನ ಬೇಡಿಕೆ ಘೋಷಣೆ ಮಾಡುವ ಮೂಲಕ ಕೇಳಿದರು. ಸರ್ಕಾರದ ವೆಚ್ಚದಲ್ಲಿ ಈ ಕಾರ್ಯಕ್ರಮ ಮಾಡಲಾಗದು. ಮುಖಂಡರು ಒಗ್ಗೂಡಿ ಪುತ್ಥಳಿ ಸಿದ್ಧಪಡಿಸಿದರೆ ಸೂಕ್ತ ಸ್ಥಳದಲ್ಲಿ ಅನಾವರಣ ಮಾಡುವ ಭರವಸೆ ನೀಡಿದರು. ಹಲವು ಸಮಸ್ಯೆಗೆ ಖುದ್ದು ಭೇಟಿ ನೀಡಿ ಬಗೆಹರಿಸುವ ಭರವಸೆ ಜೊತೆಗೆ ಅಧಿಕಾರಿಗಳು ಭೇಟಿ ನೀಡಿ ಅಲ್ಲಿಯೇ ಸೂಕ್ತ ಪರಿಹಾರ ಕಂಡುಕೊಳ್ಳಲು ಸೂಚಿಸಿದರು.

ದಲಿತರ ಕುಂದು ಕೊರತೆಗಳ ಸಭೆಗೆ ತಟ್ಟಿದ ಪ್ರತಿಭಟನೆ ಬಿಸಿ
ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸಭೆಯ ಆರಂಭಕ್ಕೆ ಮುನ್ನ ತಾಲ್ಲೂಕು ಪಂಚಾಯಿತಿ ಸಭಾಂಗಣದ ಮುಂದೆ ಪ್ರತಿಭಟನೆಯನ್ನು ನಡೆಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಮುಂದೆ ಇ ಸ್ವತ್ತು ಮಾಡುವ ವಿಚಾರದಲ್ಲಿ ಪಿಡಿಓ ವಿಳಂಬ ಅನುಸರಿಸುತ್ತಿರುವುದು ಹಾಗೂ ಹಕ್ಕುಪತ್ರ ವಿತರಣೆ ಮಾಡುತ್ತಿಲ್ಲ ಎಂಬ ವಿಚಾರ ಕುರಿತು ಮುಖಂಡರು ಧರಣಿ ಕುಳಿತರು. ಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ದಲಿತರ ವಿರೋಧಿ ಎಂದು ದೂರಿದರು. ನಂತರ ಸ್ಥಳಕ್ಕೆ ತಹಶೀಲ್ದಾರ್ ಆರತಿ ಹಾಗೂ ತಾಪಂ ಇಓ ಶಿವಪ್ರಕಾಶ್ ಆಗಮಿಸಿ ಹದಿನೈದು ದಿನದಲ್ಲಿ ಕಾನೂನು ರೀತಿ ಕ್ರಮ ವಹಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಸಭೆಯಲ್ಲಿ ತಹಶೀಲ್ದಾರ್ ಬಿ.ಆರತಿ, ತಾಪಂ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕರಾದ ವೀಣಾ ಇದ್ದರು.
