ಗುಬ್ಬಿ ತಾಲ್ಲೂಕಿನ ಬೆಲವತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಜಿ.ಲತಾ ದಯಾನಂದ್ ಹಾಗೂ ಉಪಾಧ್ಯಕ್ಷರಾಗಿ ಪಿ.ಎಸ್.ಆನಂದ್ ಕುಮಾರ್ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಕಂದಾಯ ನಿರೀಕ್ಷಕ ಮುತ್ತುರಾಜ್ ನಡೆಸಿಕೊಟ್ಟರು. ಈ ಹಿಂದೆ ಅಧ್ಯಕ್ಷರಾಗಿದ್ದ ಶಿವಗಂಗಮ್ಮ ಹಾಗೂ ಉಪಾಧ್ಯಕ್ಷರಾಗಿದ್ದ ಕೆ.ಟಿ.ಸ್ವಾಮಿ ನೀಡಿದ ರಾಜೀನಾಮೆ ಹಿನ್ನಲೆಯಲ್ಲಿ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.
ಸಾಮಾನ್ಯ ಮಹಿಳೆ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಲತಾ ದಯಾನಂದ್ ಹಾಗೂ ಸಾಮಾನ್ಯ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಆನಂದ್ ಕುಮಾರ್ ನಾಮಪತ್ರ ಸಲ್ಲಿಸಿದರು. ಏಕೈಕ ನಾಮಪತ್ರ ಹಿನ್ನಲೆ ಎರಡೂ ಸ್ಥಾನಗಳ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲತಾ ದಯಾನಂದ್ ಮಾತನಾಡಿ ಬೆಲವತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ಸರ್ಕಾರದ ಕಾರ್ಯಕ್ರಮವನ್ನು ಜಾರಿ ಮಾಡಿ ಅರ್ಹ ಫಲಾನುಭವಿಗಳಿಗೆ ನೀಡುತ್ತೇವೆ. ಕುಡಿಯುವ ನೀರು, ರಸ್ತೆ, ಬೀದಿ ದೀಪ ಜೊತೆಗೆ ಸಾಮಾಜಿಕ ಬದ್ಧತೆಯಲ್ಲಿ ಅಭಿವೃದ್ದಿ ಕೆಲಸ ಮಾಡುತ್ತೇವೆ. ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಒಗ್ಗೂಡಿ ಶ್ರಮಿಸುವುದಾಗಿ ತಿಳಿಸಿದರು.
ನೂತನ ಉಪಾಧ್ಯಕ್ಷ ಆನಂದ್ ಕುಮಾರ್ ಮಾತನಾಡಿ ರಾಜ್ಯ ಹೆದ್ದಾರಿ ಮೈಸೂರು ರಸ್ತೆಯಲ್ಲಿ ಇರುವ ಬೆಲವತ್ತ ಗ್ರಾಮ ಪಂಚಾಯಿತಿ ಮಾದರಿ ಪಂಚಾಯಿತಿ ಎನಿಸಿಕೊಳ್ಳುವ ರೀತಿ ಕೆಲಸ ಮಾಡುತ್ತೇವೆ. ಅಭಿವೃದ್ದಿ ವಿಚಾರದಲ್ಲಿ ಒಕ್ಕೊರಲಿನ ಅಭಿಪ್ರಾಯ ಹಾಗೂ ಸ್ಥಳೀಯ ಎಲ್ಲಾ ಮುಖಂಡರ ಮಾರ್ಗದರ್ಶನದಲ್ಲಿ ಗ್ರಾಮೀಣ ಅಭಿವೃದ್ಧಿ ಮಾಡುತ್ತೇವೆ. ಸರ್ಕಾರದಿಂದ ಬರುವ ಅನುದಾನವನ್ನು ಸಹ ಎಲ್ಲಾ ವಾರ್ಡ್ ಗಳಿಗೆ ಆಯಾ ಸದಸ್ಯರ ಮೂಲಕ ಅವಶ್ಯ ಕೆಲಸ ಮೊದಲು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ, ವಿ ಎಸ್ ಎಸ್ ಎನ್ ಅಧ್ಯಕ್ಷ ವಸಂತ್ ಕುಮಾರ್, ಮಂಡಿ ಬಾಬಣ್ಣ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ, ಜಿಪಂ ಮಾಜಿ ಸದಸ್ಯ ಚಂದ್ರಶೇಖರಬಾಬು, ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಜಗದೀಶ್, ಸ್ಥಳೀಯ ಮುಖಂಡರಾದ ಶಿವಕುಮಾರ್, ರಾಮೇಗೌಡ, ಭೀಮೇಶ್, ವಕೀಲ ರಮೇಶ್ ಸೇರಿದಂತೆ ಎಲ್ಲಾ ಗ್ರಾಪಂ ಸದಸ್ಯರು ಹಾಜರಿದ್ದರು.
ವರದಿ – ಎಸ್. ಕೆ. ರಾಘವೇಂದ್ರ