ಗುಬ್ಬಿ ತಾಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಕ್ಕೇನಹಳ್ಳಿ ಗೊಲ್ಲರಹಟ್ಟಿ ಭಾಗ್ಯಮ್ಮ ಪಾಂಡುರಂಗಯ್ಯ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿಯಾಗಿ ಕಂದಾಯ ನಿರೀಕ್ಷಕ ಗುರುಪ್ರಸಾದ್ ನಡೆಸಿಕೊಟ್ಟರು. ಈ ಹಿಂದೆ ಗೀತಾ ಅವರು ಸಲ್ಲಿಸಿದ ರಾಜೀನಾಮೆ ಹಿನ್ನಲೆ ತೆರೆವಾಗಿದ್ದ ಸಾಮಾನ್ಯ ಮಹಿಳಾ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾಗ್ಯಮ್ಮ ಏಕೈಕ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಸುದ್ದಿಗಾರರ ಜೊತೆ ಮಾತನಾಡಿದ ನೂತನ ಉಪಾಧ್ಯಕ್ಷೆ ಭಾಗ್ಯಮ್ಮ ಪಾಂಡುರಂಗಯ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷ ಯೋಗೇಶ್ ಮಾತನಾಡಿ ಅಭಿವೃದ್ದಿ ಕಾರ್ಯಗಳಿಗೆ ಎಲ್ಲಾ ಸದಸ್ಯರೊಂದಿಗೆ ಅಚ್ಚುಕಟ್ಟಾಗಿ ಕೆಲಸ ನಡೆಸಿದ್ದೇವೆ. ಸರ್ಕಾರದಿಂದ ಬರುವ ಎಲ್ಲಾ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಇಡೀ ಪಂಚಾಯಿತಿಯನ್ನು ಮಾದರಿಯನ್ನಾಗಿ ಮಾಡಲು ಶ್ರಮಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಬೆಂಬಲಿಗರು ನೂತನ ಉಪಾಧ್ಯಕ್ಷರಿಗೆ ಅಭಿನಂದಿಸಿದರು. ಗ್ರಾಪಂ ಸದಸ್ಯರಾದ ಕೃಷ್ಣಮೂರ್ತಿ, ಚಂದ್ರಶೇಖರ್, ಗೋಪಿನಾಥ್, ಗಂಗಾಧರಯ್ಯ, ಸುಮಿತ್ರಾ, ಪದ್ಮ, ಸುನೀತಾ, ಪಿಡಿಓ ಸಿದ್ದರಾಮಯ್ಯ, ಕಾರ್ಯದರ್ಶಿ ಶೇಖರ್ ಇತರರು ಇದ್ದರು.