ತುರುವೇಕೆರೆ ಕ್ಷೇತ್ರಕ್ಕೆ ಸಂಬಂಧಿಸಿದ ಇಡಗೂರು ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಮಾಡದೆ ಬಿಲ್ ಪಾವತಿ ಮಾಡಿದ್ದು ಈ ಬಗ್ಗೆ ತನಿಖೆಗೆ ಒತ್ತಾಯ ಮಾಡಿದ್ದರೂ ಕಾನೂನು ಕ್ರಮ ವಹಿಸದ ತಾಲ್ಲೂಕು ಪಂಚಾಯಿತಿ ಇಓ ಹಾಗೂ ಭ್ರಷ್ಟಾಚಾರ ಆರೋಪ ಹೊತ್ತ ಪಿಡಿಓ ವಿರುದ್ಧ ಜಿಲ್ಲಾ ಪಂಚಾಯಿತಿ ಸಿಇಓ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದ್ದಾರೆ.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಅಂಕಳಕೊಪ್ಪ ಗ್ರಾಮದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಎಸ್ಸಿ ಎಸ್ಟಿ ಕಾಲೋನಿಗಳಿಗೆ ರಸ್ತೆ ಚರಂಡಿ ಮಾಡದೆ ಬಿಲ್ ಪಡೆದಿರುವ ಬಗ್ಗೆ ಹಾಗೂ ಗಿಡ ನೆಡುವ ನರೇಗಾ ಯೋಜನೆ ಕಾಮಗಾರಿ ಸಹ ಬೇಕಾಬಿಟ್ಟಿ ನಡೆಸಿ ಹಣ ಗುಳುಂ ಮಾಡಿರುವ ಬಗ್ಗೆ ದಾಖಲೆ ಸಹಿತ ಇಓ ಶಿವಪ್ರಕಾಶ್ ಅವರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಡಿಮಿಡಿಗೊಂಡರು.
ಇಡಗೂರು ಗ್ರಾಪಂ ಪ್ರಭಾರ ಪಿಡಿಓ ಮಹಿಳಾ ಅಧಿಕಾರಿ ಕೆಲ ಪುಡಾರಿಗಳ ಅವ್ಯವಹಾರಕ್ಕೆ ಸಹಕಾರ ನೀಡಿದ್ದಾರೆ. ಸರಿಯಾದ ಸಮಯಕ್ಕೆ ಕಚೇರಿಗೆ ಬಾರದ ಈ ಪಿಡಿಓ ಮೂರು ಪಂಚಾಯಿತಿ ಜವಾಬ್ದಾರಿ ಇದೆ ಎನ್ನುತ್ತಾರೆ. ಸಾರ್ವಜನಿಕರಿಗೆ ಸಿಗದ ಈ ಅಧಿಕಾರಿ ಭ್ರಷ್ಟಾಚಾರಕ್ಕೆ ಸಿಲುಕಿದರೂ ಪ್ರಭಾವ ಬೀರಿ ಇಲ್ಲಿಯೇ ಉಳಿದಿದ್ದಾರೆ. ನಾನು ಅಧ್ಯಕ್ಷನಾಗಿ ಕೆಲಸ ಮಾಡಿದ್ದ ಪಂಚಾಯಿತಿ ಈ ಮಟ್ಟದ ಅವ್ಯವಹಾರದ ಕೂಪ ಆಗಿರುವುದು ವಿಷಾದ. ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ತನಿಖೆ ನಡೆಸಿ ಪಿಡಿಓ ಹಾಗೂ ಇಓ ಇಬ್ಬರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆ ಕೆಲಸಗಳಿಗೆ 15 ನೇ ಹಣಕಾಸು ಯೋಜನೆ ಹಣ ದುರ್ಬಳಕೆ ಮಾಡಿರುವ ಬಗ್ಗೆ ದಾಖಲೆ ಸಹಿತ ದೂರು ನೀಡಿದರೂ ಕ್ರಮ ವಹಿಸದ ಇಓ ಶಿವಪ್ರಕಾಶ್ ಅವರು ಇಲ್ಲಿನ ಭ್ರಷ್ಟಾಚಾರಕ್ಕೆ ಸಾಥ್ ನೀಡಿದಂತೆ ಕಾಣುತ್ತಿದೆ. ಜಾಣ ಮೌನ ವಹಿಸಿ ತನಿಖೆಗೆ ಶಿಫಾರಸು ಮಾಡದೆ ಮೀನಾ ಮೇಷ ಎಣಿಸುತ್ತಿದ್ದಾರೆ. ಎ ಗ್ರೇಡ್ ಪಂಚಾಯಿತಿ ಇದಾಗಿದ್ದರೂ ಇಲ್ಲಿ ಕಾರ್ಯದರ್ಶಿ ಇಲ್ಲ, ಲೆಕ್ಕ ಪರಿಶೋಧಕರಿಲ್ಲ, ಸರಿಯಾದ ಬಿಲ್ ಕಲೆಕ್ಟರ್ ಇಲ್ಲ. ಇಲ್ಲಿನ ಸಿಬ್ಬಂದಿಗಳನ್ನು ಬಳಸಿ ಗಿಡ ನೆಡುವ ಕಾಮಗಾರಿ ಮಾಡಿ ಹಣ ನುಂಗಲಾಗಿದೆ. ಸಂಬಂಧಿಕರ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿ ಮಾಡಲಾಗಿದೆ ಎಂದು ನೇರ ಆರೋಪ ಮಾಡಿದರು.
ಕಸ ವಿಲೇವಾರಿ ಮಾಡುವ ಟ್ರ್ಯಾಕ್ಟರ್ ಕೆಲಸ ಮಾಡುತ್ತಿಲ್ಲ ಈ ಬಗ್ಗೆ ಹಾಗೂ ಕಾಮಗಾರಿ ನಡೆಯದ ಹಲವು ಕೆಲಸದ ಬಗ್ಗೆ ಮಾಹಿತಿ ಕೇಳಿದರೆ ಸಬೂಬು ಹೇಳಿ ದಿನ ಕಳೆಯುವ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ದೇವೆ ಎಂದ ಅವರು ತುರುವೇಕೆರೆ ಕ್ಷೇತ್ರದಲ್ಲಿ 50 ಗ್ರಾಮ ಲೆಕ್ಕಾಧಿಕಾರಿಗಳು ಜಾಗದಲ್ಲಿ ಕೇವಲ 15 ಮಂದಿ ಕೆಲಸ ಮಾಡುತ್ತಾರೆ. ಪಿಡಿಓಗಳು ಮೂರು ಪಂಚಾಯಿತಿ ಜವಾಬ್ದಾರಿ ವಹಿಸಿದ್ದಾರೆ. ಸಿಬ್ಬಂದಿ ಕೊರತೆಯಲ್ಲಿ ಬರೀ ಭ್ರಷ್ಟಚಾರ ಮಾತ್ರ ಎದ್ದು ಕಾಣುತ್ತಿದೆ. ಇಂತಹ ಭ್ರಷ್ಟ ಹಣದಲ್ಲಿ ಬಾರ್ ನಡೆಸುತ್ತಾರೆ. ಪಾಲುದಾರಿಕೆಯಲ್ಲಿ ಡಾಬಾ ನಡೆಸುವವರು ಇಲ್ಲಿದ್ದಾರೆ. ಇದಕ್ಕೆ ಸಾಕ್ಷಿ ನನ್ನಲ್ಲಿದೆ. ಕಾಣುವ ಅವ್ಯವಹಾರ ವಿರುದ್ಧ ಮೊದಲ ಹೋರಾಟ ಆರಂಭಿಸಿದ್ದೇನೆ. ಆರೋಪ ಹೊತ್ತ ಅಧಿಕಾರಿಗಳ ವಿರುದ್ಧ ಕ್ರಮ ಜಾರಿಯಾಗಬೇಕು. ಇಲ್ಲವಾದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಇಡಗೂರು ರವಿ, ಸುರೇಶ್, ರುದ್ರೇಶ್, ಬೆಟ್ಟಯ್ಯ ಇತರರು ಇದ್ದರು.