ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೊಮ್ಮರಸನಹಳ್ಳಿ ಬಿ.ಕೆ.ಪರಮಶಿವಯ್ಯ ಅಧ್ಯಕ್ಷರಾಗಿ ಹಾಗೂ ತೆವಡೇಹಳ್ಳಿಯ ಟಿ.ಎಸ್. ಕಿರಣ್ ಕುಮಾರ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಪಿಎಲ್ ಡಿ ಬ್ಯಾಂಕ್ ಆವರಣದಲ್ಲಿ ನಡೆದ ಚುನಾವಣೆಯನ್ನು ಸಹಕಾರಿ ಇಲಾಖೆಯ ಮಾಲತೇಶ್ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲದೆ ಏಕೈಕ ನಾಮಪತ್ರ ಸಲ್ಲಿಕೆಯಾದ ಹಿನ್ನಲೆ ಎರಡೂ ಸ್ಥಾನವನ್ನು ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಮರು ಆಯ್ಕೆಯಾದ ನೂತನ ಅಧ್ಯಕ್ಷ ಬಿ.ಕೆ.ಪರಮಶಿವಯ್ಯ ಮಾತನಾಡಿ ಅವರು ಸುದ್ದಿಗಾರರ ಜೊತೆ ಮಾತನಾಡಿ ಕೃಷಿಕರ ಪರ ಕೆಲಸ ಮಾಡುವ ಪಿಎಲ್ ಡಿ ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಜೊತೆ ಶ್ರಮಿಸುತ್ತೇವೆ. ಕಳೆದ 34 ವರ್ಷದಿಂದ ಈ ಬ್ಯಾಂಕ್ ಆಡಳಿತ ಮಂಡಳಿಯಲ್ಲಿದ್ದು ರೈತಪರ ಕೆಲಸ ಮಾಡಿದ್ದೇನೆ. ದುಸ್ಥಿತಿಯ ಕಂಡ ಸಮಯದಲ್ಲಿ ಬ್ಯಾಂಕ್ ಚೇತರಿಸಿ ಈಗ ಉನ್ನತ ಸ್ಥಿತಿಯತ್ತ ಸಾಗಿದೆ. ರಾಜ್ಯ ನಿರ್ದೇಶಕರಾಗಿ ಕೂಡಾ ಕೆಲಸ ಮಾಡುವ ಅವಕಾಶ ಸಿಕ್ಕ ಹಿನ್ನಲೆ ರೈತರ ಕೃಷಿ ಅನುಕೂಲಕ್ಕೆ ಕೆಲಸ ಮಾಡುತ್ತೇವೆ ಎಂದ ಅವರು ರಾಜಕಾರಣಿಗಳ ಸಾಲಮನ್ನಾ ಹೇಳಿಕೆ ಮರುಪಾವತಿಗೆ ಹೊಡೆತ ತಂದಿದೆ. ಈಗ ನಮ್ಮ ಬ್ಯಾಂಕ್ ಶೇಕಡಾ 87 ರಷ್ಟು ಮರುಪಾವತಿ ಮಾಡಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಎಲ್ಲಾ ಸದಸ್ಯರ ಮಾರ್ಗದರ್ಶನದಲ್ಲಿ ಬ್ಯಾಂಕ್ ಮುನ್ನೆಡೆಸುತ್ತೇವೆ ಎಂದರು.
ನೂತನ ಉಪಾಧ್ಯಕ್ಷ ಟಿ.ಎಸ್.ಕಿರಣ್ ಕುಮಾರ್ ಮಾತನಾಡಿ ಅವಿರೋಧ ಆಯ್ಕೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಈ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಬ್ಯಾಂಕ್ ಬೆಳೆಸುವ ಕೆಲಸ ಮಾಡುತ್ತೇವೆ. ಕೃಷಿ ಸಾಲ ನೀಡುತ್ತಾ ಬ್ಯಾಂಕ್ ರೈತರ ಪರ ಕೆಲಸ ಮಾಡಲಿದೆ. ಸಹಕಾರಿ ಕ್ಷೇತ್ರದಲ್ಲಿ ಪಿಎಲ್ ಡಿ ಬ್ಯಾಂಕ್ ಹೆಸರು ಉಳಿಸುವ ಕೆಲಸ ಎಲ್ಲರ ಜೊತೆಗೂಡಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ, ನಾಮ ನಿರ್ದೇಶಿತ ಸದಸ್ಯ ಎಂವಿ.ಶ್ರೀನಿವಾಸಯ್ಯ, ಬ್ಯಾಂಕ್ ನಿರ್ದೇಶಕರಾದ ನಂಜೇಗೌಡ, ಎಸ್.ಎಲ್.ನರಸಿಂಹಯ್ಯ, ಎನ್.ಲಕ್ಷ್ಮೀ, ಬುಕ್ಕಸಾಗರ ಮಹದೇವಯ್ಯ, ಸುಧಾಮಣಿ, ರಾಜಕುಮಾರ್, ಸಂತೋಷ್, ದೇವರಾಜ್, ಸೋಮಶೇಖರ್, ಪ್ರಮೋದ್, ನರಸಿಂಹಯ್ಯ, ಪ್ರಕಾಶ್ ಇತರರು ಇದ್ದರು.