ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಕೇವಲ ಒಂದು ತಾಸು ತ್ರೀ ಫೇಸ್ ಕರೆಂಟ್ ನೀಡದ ಬೆಸ್ಕಾಂ ಅಧಿಕಾರಿಗಳು ರೈತರಿಗೆ ಉಡಾಫೆ ಉತ್ತರ ನೀಡುತ್ತಾರೆ. ಕೇಳಿದರೆ ನಿಮ್ಮ ಹಣೆ ಬರಹ ಎನ್ನುವ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಸೋಮವಾರ ನಿಟ್ಟೂರು ಕಚೇರಿ ಸ್ಥಳದಲ್ಲೇ ದಿಗ್ಬಂಧನ ಹಾಕಿದ ನಿಟ್ಟೂರು ಹೋಬಳಿ ರೈತರು ಬೆಸ್ಕಾಂ ಕಚೇರಿ ಬಾಗಿಲು ಹಾಕಿ ದಿಢೀರ್ ಪ್ರತಿಭಟನೆ ನಡೆಸಿದರು.
ನಿರಂತರವಾಗಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆಡುತ್ತಿದೆ ಎಂದು ಬೆಳಗ್ಗೆ ಕಚೇರಿ ಮುಂದೆ ಜಮಾಯಿಸಿದ ನೂರಾರು ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಎಇಇ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಸ್ಥಳದಲ್ಲೇ ಪರಿಹಾರ ನೀಡದೇ ತೆರಳುವಂತಿಲ್ಲ ಎಂದು ಸುಮಾರು ಮೂರು ಗಂಟೆಗಳ ಕಾಲ ಸುಧೀರ್ಘ ಪ್ರತಿಭಟನೆ ನಡೆಸಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಸರ್ಕಾರವೇ ಏಳು ಗಂಟೆಗಳ ಕಾಲ ವಿದ್ಯುತ್ ನೀಡುವುದಾಗಿ ಬೊಗಳೆ ಬಿಡುತ್ತಲೇ ಇದೆ. ಆದರೆ ವಾಸ್ತವದಲ್ಲಿ ಒಂದು ತಾಸು ತ್ರೀ ಫೇಸ್ ಕರೆಂಟ್ ಬರುತ್ತಿಲ್ಲ. ಬೇಸಿಗೆ ಆರಂಭದಲ್ಲೇ ಈ ರೀತಿ ಕಳ್ಳಾಟ ಆಡುತ್ತಿರುವ ಬೆಸ್ಕಾಂ ಇಲ್ಲಿಯವರೆಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಅದಕ್ಕೆ ಪೂರಕವಾಗಿ ಅಧಿಕಾರಿಗಳು ಕೂಡ ಮನಸೋ ಇಚ್ಛೆ ಕರೆಂಟ್ ನೀಡುತ್ತಿದ್ದು ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಈ ಕೂಡಲೇ ರೈತರಿಗೆ ಕರೆಂಟ್ ನೀಡದಿದ್ದರೆ ಹೆದ್ದಾರಿಗೆ ಇಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ರೈತರನ್ನು ಕೆಣಕಿದರೆ ಮುಂದಿನ ಅನಾಹುತಕ್ಕೆ ಬೆಸ್ಕಾಂ ಇಲಾಖೆಯೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು.
ಏಳು ಗಂಟೆ ತ್ರೀ ಫೇಸ್ ಕರೆಂಟ್ ಎನ್ನುವ ಅಧಿಕಾರಿಗಳು ಅದರಲ್ಲೇ ಹಳ್ಳಿಗಳಿಗೆ ಮೂರು ನಾಲ್ಕು ಗಂಟೆ ಹಂಚಿ ನಮ್ಮಲ್ಲೇ ಸಂಘರ್ಷ ಹುಟ್ಟು ಹಾಕಿದ್ದಾರೆ. ಬೇಸಿಗೆಯ ಸಮಸ್ಯೆ ಮೊದಲೇ ತಿಳಿದ ಅಧಿಕಾರಿಗಳು ಯಾವುದೇ ಕ್ರಮ ವಹಿಸದೆ ಈಗ ಹೆಂಡತಿಯನ್ನು ಕೆಡವಿ ದಡಿ ಹುಡ್ಕಿದಂತೆ ಎಂಬ ಗಾದೆಯನ್ನು ರುಜುವಾತು ಮಾಡಿದ್ದಾರೆ. ನಮಗೆ ಯಾವುದೇ ಪುಕ್ಕಟೆ ಕರೆಂಟ್ ಬೇಕಿಲ್ಲ. ನಮ್ಮ ಹಕ್ಕಿನ ಕೃಷಿ ನೀರಿಗಾಗಿ ತ್ರೀ ಫೇಸ್ ಕರೆಂಟ್ ನೀವೇ ಹೇಳಿದಂತೆ ಏಳು ಗಂಟೆ ಕ್ರಮ ಬದ್ಧವಾಗಿ ನೀಡಿ ಎಂದು ಒತ್ತಾಯಿಸಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಕಳೆದ ಹದಿನೈದು ದಿನಗಳಿಂದ ಬೆಸ್ಕಾಂ ತಾಲ್ಲೂಕಿನ ರೈತರ ಜೀವನ ಜೊತೆ ಚೆಲ್ಲಾಟ ಆಡುತ್ತಿದೆ. ಸಾರ್ವಜನಿಕ ಸೇವೆ ಮಾಡುವಲ್ಲಿ ಅನರ್ಹ ಎನಿಸಿಕೊಂಡ ಈ ಇಲಾಖೆ ರೈತರ ಮೇಲೆ ಆರೋಪ ಮಾಡಿ ಕರೆಂಟ್ ಕದಿಯುತ್ತಾರೆ ಎನ್ನುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಗ್ರಾಮೀಣ ಭಾಗದ ರೈತರ ಕರೆಂಟ್ ಬೇರೆಡೆಗೆ ತೆಗೆದುಕೊಂಡು ಹೋಗುವ ಅಧಿಕಾರಿಗಳು ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಆದೇಶ ಪಾಲಿಸುತ್ತಿದ್ದಾರೆ. ಡಿಕೆಶಿ ಅವರು ಜಿಲ್ಲೆಯ ರೈತರ ಜೊತೆ ನೀರು ಮತ್ತು ಕರೆಂಟ್ ಎರಡರಲ್ಲೂ ಆಟವಾಡುತ್ತಿದ್ದಾರೆ. ಸೋಲಾರ್ ಕಂಪೆನಿ ಜೊತೆ ಡೀಲ್ ಮಾಡಿಕೊಂಡು ಈ ರೀತಿ ಸಿಂಗಲ್ ಫೇಸ್ ಕರೆಂಟ್ ಸಹ ನೀಡೋದಿಲ್ಲ ಎಂಬ ಆದೇಶ ಸಹ ಹೊರಡಿಸಿದ್ದಾರೆ ಎಂದು ಆರೋಪಿಸಿದರು.
ಈ ಭಾಗದಲ್ಲಿ 52 ಫೀಡರ್ ಗೆ ಕೇವಲ 9 ಮಂದಿ ಲೈನ್ ಮ್ಯಾನ್ ಇದ್ದಾರೆ. ಲೈನ್ ಕಟ್ಟಾದರೆ ಎರಡು ದಿನ ಬೇಕು ಸರಿಪಡಿಸಲು ಎಂಬುದು ತಿಳಿದ ಸತ್ಯ. ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಎರಡೂ ಒಗ್ಗೂಡಿ ಕೆಲಸ ಮಾಡಬೇಕು. ಆದರೆ ಇಲ್ಲಿ ಬಾಂಧವ್ಯ ಇಲ್ಲವೆಇಲ್ಲ ಎಂದ ಅವರು ಐದು ಬಾರಿ ಗೆದ್ದ ಗುಬ್ಬಿ ಶಾಸಕರು ರೈತರ ಕಷ್ಟ ಆಲಿಸಬೇಕು. ನಿಮ್ಮಲ್ಲಿ ಸ್ವಾಭಿಮಾನ ಇದ್ದರೆ, ಜನರ ಋಣ ನಿಮ್ಮ ಮೇಲಿದ್ದರೆ ಕೂಡಲೇ ಸರ್ಕಾರ ಜೊತೆ ಚರ್ಚಿಸಿ ಕರೆಂಟ್ ವ್ಯವಸ್ಥೆ ಮಾಡಿ. ಬೆಸ್ಕಾಂ ಅಧಿಕಾರಿಗಳನ್ನು ಸಿಂಗಲ್ ಫೇಸ್ ಕೊಡದಿರಲು ಕಾರಣ ಕೇಳಿ ಎಂದು ಸವಾಲೆಸೆದರು.
ನಂತರ ಸ್ಥಳಕ್ಕೆ ಆಗಮಿಸಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಶಾಂತ್ ಕೂಡ್ಲಗಿ ಅವರನ್ನು ಸುತ್ತುವರಿದ ರೈತರು ಒಂದು ತಾಸು ಬಿಸಿಲಿನಲ್ಲಿ ಕರೆಂಟ್ ಬಗ್ಗೆ ನಾನಾ ಪ್ರಶ್ನೆ ಕೇಳಿದರು. ಉತ್ತರ ನೀಡಲಾಗದೆ ಕಾಲ್ಕಿತ್ತಿದ್ದ ವೇಳೆ ರೈತರು ದಿಗ್ಬಂಧನ ಹಾಕಿ ಸೂಕ್ತ ಪರಿಹಾರಕ್ಕೆ ಆಗ್ರಹ ಮಾಡಿದರು. ನಂತರ ಸ್ಥಳದಲ್ಲೇ ಸಿಬ್ಬಂದಿ ಜೊತೆ ಚರ್ಚಿಸಿ ಸಿಂಗಲ್ ಫೇಸ್ ಬೆಳಿಗ್ಗೆಯಿಂದ ಸಂಜೆ ಹಾಗೂ ತ್ರೀ ಫೇಸ್ ಕರೆಂಟ್ ಏಳು ಗಂಟೆ ಹರಿಸುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಸ್ಥಳದಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಎಚ್.ಟಿ.ಭೈರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್, ಬಿಜೆಪಿ ಮುಖಂಡ ಶಿವಶಂಕರ್ ಬಾಬು, ಕೆಪಿಸಿಸಿ ಮಾಜಿ ಸದಸ್ಯ ಕೆ.ಆರ್.ತಾತಯ್ಯ, ರಮೇಶ್ ಬೊಮ್ಮರಸನಹಳ್ಳಿ, ಶಿವಕುಮಾರ ಸ್ವಾಮಿ, ಸಿದ್ದರಾಮಣ್ಣ, ದಯಾನಂದ್, ಶಿವಮೂರ್ತಿ, ನಿತ್ಯಾನಂದ ಮೂರ್ತಿ, ಸುಗ್ಗಿ ಮೋಟಾರ್ಸ್ ಸಿದ್ದರಾಮಣ್ಣ ಹಾಗೂ ನಿಟ್ಟೂರು ಹೋಬಳಿಯ ನೂರಾರು ಮಂದಿ ರೈತರು ಭಾಗವಹಿಸಿದ್ದರು.
ವರದಿ – ಎಸ್. ಕೆ. ರಾಘವೇಂದ್ರ