ಕ್ಷುಲ್ಲಕ ಕಾರಣಕ್ಕೆ ಕಾಲೇಜು ಹುಡುಗರ ಎರಡು ಗುಂಪು ಮೈದಾನದಲ್ಲಿ ಹೊಡೆದಾಡಿಕೊಂಡ ಘಟನೆ ಗುಬ್ಬಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ರಂಗಮಂದಿರ ಹಿಂಭಾಗ ನಡೆದಿದೆ.
ಕಾಲೇಜು ಮುಗಿದ ಬಳಿಕ ಮೈದಾನ ಸೇರಿದ ವಿದ್ಯಾರ್ಥಿಗಳು ಮಾತಿನ ಚಕಮಕಿಗೆ ನಡೆಸಿದ್ದಾರೆ. ನಂತರ ಕೈ ಮಿಲಾಯಿಸಿ ಹೊಡೆದಾಟ ಸಹ ನಡೆಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇತ್ತೀಚಿಗೆ ಮೈದಾನದಲ್ಲಿ ಹುಡುಗರ ಗುಂಪು ಠಿಕಾಣಿ ಹೂಡಿ ಕೆಲ ವಿದ್ಯಾರ್ಥಿಗಳ ಬೆದರಿಸುವ ಘಟನೆ ನಡೆಯುತ್ತವೆ ಎಂದು ಇದೇ ಸಂದರ್ಭದಲ್ಲಿ ಕೆಲ ಹಿರಿಯ ನಾಗರೀಕರು ಅಭಿಪ್ರಾಯ ತಿಳಿಸಿದ್ದಾರೆ.
ಕಾಲೇಜು, ಹೈಸ್ಕೂಲ್ ಹಾಗೂ ಪ್ರಾಥಮಿಕ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಈ ಮೈದಾನದಲ್ಲಿ ಓಡಾಡುತ್ತಾರೆ. ಕಾಲೇಜು ವಿದ್ಯಾರ್ಥಿಗಳ ಗುಂಪುಗಾರಿಕೆ, ಹೊಡೆದಾಟ, ಬೆದರಿಕೆ ಅವಾಜ್ ಗಳು ಇವೆಲ್ಲಾ ನಡವಳಿಕೆಗೆ ಹೈಸ್ಕೂಲ್ ಪ್ರಾಥಮಿಕ ಮಕ್ಕಳನ್ನು ಭಯಭೀತರನ್ನಾಗಿಸಿದೆ. ಶಿಕ್ಷಕರು, ಉಪನ್ಯಾಸಕರ ಭಯ ಇಲ್ಲದ ಪುಂಡರ ಗುಂಪು ಕಡಿವಾಣಕ್ಕೆ ಪೊಲೀಸರ ಕಾರ್ಯಾಚರಣೆ ಅಗತ್ಯವಿದೆ.
ಮದ್ಯಾಹ್ನ ವೇಳೆಯಲ್ಲಿ ನಿರ್ಜನ ವಾತಾವರಣ ಇರುವ ಮೈದಾನದಲ್ಲಿ ಅಲ್ಲಲ್ಲೇ ಗುಂಪು ಕಾಣ ಸಿಗುತ್ತವೆ. ಈ ಹುಡುಗರು ಕಾಲೇಜು ಹೊರತಾದ ಚಟುವಟಿಕೆಯಲ್ಲಿ ಕಾಣಸಿಗುತ್ತಾರೆ. ಚಕ್ಕರ್ ಹೊಡೆದು ತಿರುಗುವ ವಿದ್ಯಾರ್ಥಿಗಳ ನಿಯಂತ್ರಣ ಮಾಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಪೊಲೀಸ್ ಇಲಾಖೆ. ಶಾಲಾ ಕಾಲೇಜು ಅವರಣದಿಂದ ಹೊರ ನಡೆಯುವ ಘಟನೆಗೆ ಜವಾಬ್ದಾರಿ ತೆಗೆದುಕೊಳ್ಳದ ಅಧ್ಯಾಪಕ ವರ್ಗ ಪೋಷಕರಿಗೆ ಮಾಹಿತಿ ರವಾನಿಸುತ್ತಾರೆ. ಆದರೆ ಗುಂಪುಗಾರಿಕೆ, ಹೊಡೆದಾಟ, ಬಡಿದಾಟ ಕಡಿವಾಣಕ್ಕೆ ಪೊಲೀಸರ ವಾಹನ ನಿತ್ಯ ಬೀಟ್ ಮಾಡುವ ಅಗತ್ಯವಿದೆ. ಕಾಲೇಜು ಆರಂಭ ಹಾಗೂ ಅಂತ್ಯ ಈ ವೇಳೆಯಲ್ಲಿ ಪೊಲೀಸರ ದರ್ಶನ ಮಾತ್ರ ಪುಂಡು ಹುಡುಗರ ಚಟುವಟಿಕೆಗೆ ಬ್ರೇಕ್ ಬೀಳಲಿದೆ.
ಶಾಲಾ ಕಾಲೇಜು ಮುಗಿದ ಬಳಿಕ ಪುಂಡಾಟಿಕೆಯ ವರಸೆ ಬಸ್ ನಿಲ್ದಾಣಕ್ಕೆ ವರ್ಗಾವಣೆ ಆಗಲಿದೆ. ಸರ್ಕಾರಿ ಬಸ್ಸಿಗಾಗಿ ಕಾದು ಕುಳಿತ ವಿದ್ಯಾರ್ಥಿಗಳ ಜೊತೆಯಲ್ಲೇ ಪುಂಡು ಪೋಕರಿಗಳ ಹಾವಳಿ ಆರಂಭವಾಗುತ್ತದೆ. ಹೆಣ್ಣು ಮಕ್ಕಳು ಬಸ್ಸಿಗಾಗಿ ಕಾದು ಕುಳಿತ ಸಮಯ ಸಾಕಷ್ಟು ಕಿರಿಕಿರಿಗೆ ಒಳಗಾಗಿದ್ದಾರೆ. ಇಲ್ಲೂ ಗುಂಪುಗಳ ಜಗಳ ಮುಂದುವರೆದು ಪ್ರಯಾಣಿಕರಿಗೆ ಭಯವನ್ನೇ ಹುಟ್ಟಿಸಿದೆ. ಈ ಬಗ್ಗೆ ಸಾರ್ವಜನಿಕರ ಶಾಂತಿ ಸಭೆಯಲ್ಲೂ ಸಾರ್ವಜನಿಕರು ಚರ್ಚೆ ನಡೆಸಿದ್ದಾರೆ.
