ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಮಯ ಪಾಲನೆ ಮಾಡಿದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಐಟಿ ಉದ್ಯೋಗಿ, ನಿರ್ದೇಶ್ ಸ್ವಯಂ ಸೇವಕ ತಂಡದ ಮುಖ್ಯಸ್ಥೆ ವೀಣಾ ತಿಳಿಸಿದರು.
ಗುಬ್ಬಿ ತಾಲೂಕಿನ ಕಡಬ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಶಾಲಾ ವಿಭಾಗದಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮೊದಲು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಸಮಯದ ಬಗ್ಗೆ ಬದ್ಧತೆ ಬೆಳೆಸಿಕೊಂಡಾಗ ತಂದೆ ತಾಯಿಗಳನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಪೋಷಕರು ಮೊದಲು ಶಿಸ್ತು ಬೆಳೆಸಿಕೊಂಡು ಮಕ್ಕಳಿಗೆ ಮಾದರಿಯಾಗಿ ಇರಬೇಕೆಂದು ಸಲಹೆ ನೀಡಿದರು.

ಪ್ರಾಂಶುಪಾಲ ಪಾಲಾಕ್ಷ ಆರ್ ಹಾಗಲವಾಡಿ ಮಾತನಾಡಿ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಗ್ರಾಮಸ್ಥರ ಪಾತ್ರ ಪ್ರಮುಖವಾಗಿರುತ್ತದೆ. ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರ ಜೊತೆಗೆ ಪೋಷಕರು ಕೈಜೋಡಿಸಿದಾಗ ಶಾಲೆಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಬಂಡವಾಳ ಶಾಹಿಗಳ ವ್ಯವಸ್ಥೆಯಲ್ಲಿ ಬಡವರ ಮಕ್ಕಳ ಶಿಕ್ಷಣ ತೊಂದರೆಗೆ ಸಿಲುಕುತ್ತದೆ. ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿದ ಮಹನೀಯರ ಹಲವಾರು ನಿದರ್ಶನಗಳು ನಮ್ಮ ಕಣ್ಣು ಮುಂದೆ ಇವೆ. ಅದಕ್ಕೆ ಕಾರಣ ಬಡತನ, ನೋವು, ನಲಿವುಗಳನ್ನು ಅವರು ಕಂಡಿರುತ್ತಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ತಿಳಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಪೋಷಕರು ತಮ್ಮ ಮನೆಯಲ್ಲಿ ಮಕ್ಕಳಿಗೆ ಕಲಿಕೆಯ ಆಸಕ್ತಿಯನ್ನು ಬೆಳೆಸಬೇಕು. ಆಗ ತಮ್ಮ ಮಕ್ಕಳು ಸಮಾಜದಲ್ಲಿ ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಇಂದಿರಾ, ನಿರ್ದೇಶ್ ಸ್ವಯಂ ಸೇವಕ ತಂಡದ ಸದಸ್ಯರಾದ ಗೀತಾ, ರೇಣು, ರೇಷ್ಮಾ, ಇಸ್ಮಾಯಿಲ್, ನಾಗರಾಜು , ಮುಕ್ಕಣ್ಣಪ್ಪ, ಸಿದ್ದಣ್ಣ ವಸಿಮ್ ಮಾಜಿ ಗ್ರಾಪಂ ಸದಸ್ಯ ಚನ್ನಬಸವಣ್ಣ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಜರಿದ್ದರು.