ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಗ್ರಾಮೀಣ ಭಾಗದಲ್ಲಿ ಪೋಷಕರು ಹಾಗೂ ಜನಪ್ರತಿನಿಧಿಗಳು ಒಕ್ಕೊರಲಿನ ಅಭಿಪ್ರಾಯದಲ್ಲಿ ಮಾಡಬೇಕು. ಸಮುದಾಯವೇ ಶಾಲೆಗಳನ್ನು ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಕರೆ ನೀಡಿದರು.
ಗುಬ್ಬಿ ತಾಲ್ಲೂಕಿನ ಎಂ.ಎನ್.ಕೋಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡುವ ಕೆಲಸ ಇಲಾಖೆ ಮಾಡುತ್ತಿದೆ. ಅದರ ಸದ್ವಿನಿಯೋಗ ಮಕ್ಕಳು ಪಡೆಯಬೇಕು ಎಂದರು.
ಖಾಸಗಿ ಶಾಲೆಯ ವ್ಯಾಮೋಹ ಈಗ ಗ್ರಾಮೀಣ ಭಾಗದಲ್ಲಿ ಹರಡಿದಂತೆ ಸರ್ಕಾರಿ ಶಾಲೆಗಳು ಮಂಕಾಗಿವೆ. ಬಿಸಿಯೂಟ, ಹಾಲು, ರಾಗಿ ಅಂಬಲಿ, ಮೊಟ್ಟೆ, ಬಾಳೆಹಣ್ಣು ಹೀಗೆ ಅನೇಕ ಪೌಷ್ಟಿಕ ಆಹಾರ ನೀಡುವ ಜೊತೆಗೆ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ನೀಡುತ್ತಿರುವುದು ಉತ್ತಮ ಶಿಕ್ಷಣ ಪಡೆಯುವ ಮಕ್ಕಳಿಗೆ ಏಕಾಗ್ರತೆ ಸಾಧಿಸಲು ಅನುವು ಮಾಡಿದೆ ಎಂದರು.
ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಮಾತನಾಡಿ ಗ್ರಾಮೀಣ ಮಕ್ಕಳಿಗೆ ಸೂಕ್ತ ಶಿಕ್ಷಣ ಸಿಕ್ಕಲ್ಲಿ ದೇಶಕ್ಕೆ ಆಸ್ತಿ ಆಗುವ ಮಾನವ ಸಂಪನ್ಮೂಲ ಉತ್ಪತ್ತಿಯಾಗುತ್ತದೆ. ಸರ್ಕಾರ ಕೂಡ ದೇಶದ ಅಭಿವೃದ್ಧಿಗೆ ಶಿಕ್ಷಣ ಕ್ಷೇತ್ರದ ಪ್ರಗತಿಯಿಂದ ಸಾಧ್ಯವಿದೆ ಎಂಬ ಅಂಶ ಮನಗಂಡು ಪ್ರತಿ ಬಜೆಟ್ ನಲ್ಲಿ ಕೋಟ್ಯಾಂತರ ರೂಪಾಯಿ ಮೀಸಲು ಅನುದಾನ ತೆಗೆದು ಇಡುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಕರೆ ತರುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಪಿಡಿಓ ಕೃಷ್ಣಮೂರ್ತಿ ಮಾತನಾಡಿ ಪಂಚಾಯಿತಿಯಿಂದ ಬರುವ ಅನುದಾನದಲ್ಲಿ ವಿಶೇಷವಾಗಿ ಶಾಲೆಗಳ ಅಭಿವೃದ್ಧಿಗೆ ಮೀಸಲಿಟ್ಟು ಶಿಕ್ಷಣ ಕ್ಷೇತ್ರ ಬೆಳೆಸುವ ಕಾರ್ಯ ಮಾಡುತ್ತೇವೆ. ನರೇಗಾ ಯೋಜನೆ ಬಳಸಿ ಶಾಲೆಗೆ ಅವಶ್ಯ ಮೂಲಭೂತ ಸೌಕರ್ಯ ಒದಗಿಸಲು ಆಡಳಿತ ಮಂಡಳಿ ಅಧ್ಯಕ್ಷರಾದಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಶಾಲೆಗಳ ಉನ್ನತೀಕರಣ ಗೊಳಿಸುವ ಕೆಲಸ ಒಟ್ಟಾಗಿ ನಡೆಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶಶಿಕಲಾ ಯೋಗೀಶ್, ಸದಸ್ಯರಾದ ದಿಲೀಪ್ ಕುಮಾರ್, ಸಿದ್ದಗಂಗಮ್ಮ ಕಲ್ಲೇಶ್, ಶೈಲಜಾ ಗಂಗಾಧರಸ್ವಾಮಿ, ಉಮಾ ತೇಜಣ್ಣ, ಮೋಹನ್ ಕುಮಾರ್, ಮುಖಂಡರಾದ ಮಾರುತಿಕುಮಾರ್, ಸುರೇಶ್ ಬಾಬು, ಸದಾಶಿವಯ್ಯ, ಸುಧಾಕರ್, ವಸಂತ್ ಕುಮಾರ್, ಕಿರಣ್ ಕುಮಾರ್, ಶಿಕ್ಷಕರಾದ ಶಾಂತಕುಮಾರ್, ಮಮ್ತಾಜ್, ಗಾಯತ್ರಿದೇವಿ, ಮುಬಿನ್ ತಾಜ್ ಹಾಗೂ ಎಸ್ ಡಿಎಂಸಿ ಸದಸ್ಯರು ಸೇರಿದಂತೆ ಶಾಲಾ ಪೋಷಕರು ಇತರರು ಇದ್ದರು.