ಕೃಷಿ ಕೂಲಿ ಕಾರ್ಮಿಕರ ಕೊರತೆ ಇರುವ ಈ ಸಂದರ್ಭದಲ್ಲಿ ರೈತರು ಆಧುನಿಕ ತಂತ್ರಜ್ಞಾನದ ಯಂತ್ರಗಳ ಬಳಕೆ ಮಾಡಿಕೊಂಡು ವಾಣಿಜ್ಯ ಬೆಳೆ ಕೃಷಿ ನಡೆಸಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಕರೆ ನೀಡಿದರು.
ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಶ್ರೀ ತುಳಸಿ ರಂಗನಾಥಸ್ವಾಮಿ ಇಂಜಿನಿಯರಿಂಗ್ ವರ್ಕ್ಸ್ ಅಂಡ್ ಟ್ರೇಡರ್ ಆಯೋಜಿಸಿದ್ದ ರೈತರಿಗೆ ಎಲ್ ಟಿಎಂ ಅಡಕೆ ಸುಲಿಯುವ ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಸನ್ಮಾನಿಸಿ ಮಾತನಾಡಿದ ಅವರು ಯುವ ರೈತನೊಬ್ಬ ಶ್ರಮದ ಫಲ ಇಂದು ಉದ್ಯಮಿಯಾಗಿ ಮಾರ್ಪಡಿಸಿದೆ. ಗ್ರಾಮೀಣ ಪ್ರತಿಭೆಗೆ ಬೆಲೆ ತಂದ ಲಕ್ಕೇನಹಳ್ಳಿ ಮಂಜುನಾಥ್ ಅವರು ತಯಾರಿಸಿದ ಅಡಕೆ ಸುಲಿಯುವ ಯಂತ್ರ ರಾಜ್ಯದ ನಾನಾ ಭಾಗಗಳಿಗೆ ತಲುಪಿವೆ. ಮುಂದಿನ ಉಜ್ವಲ ಭವಿಷ್ಯಕ್ಕೆ ಯುವ ಉದ್ಯಮಿಗೆ ಸರ್ಕಾರದಿಂದ ಸಹಕಾರ, ಸಬ್ಸಿಡಿ ದೊರಕಿಸಿ ಮತ್ತಷ್ಟು ಬೆಳೆಯಲು ಅವಕಾಶ ನೀಡಲಾಗುವುದು ಎಂದರು.
ಅತಿ ಹೆಚ್ಚು ಬೋರ್ ವೆಲ್ ಹೊಂದಿರುವ ನಮ್ಮ ತಾಲ್ಲೂಕು ವಿದ್ಯುತ್ ಬಳಕೆಯಲ್ಲಿ ಮೊದಲಿದೆ. ವಿದ್ಯುತ್ ವಿತರಣಾ ಕೇಂದ್ರಗಳು ನಮ್ಮಲ್ಲೇ ಹೆಚ್ಚಾಗಿದೆ. ಈ ಮಧ್ಯೆ ವಾಣಿಜ್ಯ ಬೆಳೆ ತೆಂಗು ಅಡಕೆ ಬೆಳೆದು ರೈತರು ಆರ್ಥಿಕ ಸಧೃಡತೆ ಗಳಿಸಿದ್ದಾರೆ. ಆದರೆ ಕೂಲಿಕಾರರ ಕೊರತೆ ನೀಗಿಸಲು ಇಂತಹ ಯಂತ್ರಗಳ ಮೊರೆ ಹೋಗುವುದು ಸೂಕ್ತ. ಯುವಕರು ಗ್ರಾಮೀಣ ಭಾಗದಲ್ಲಿ ಪೋಲಿ ಬೀಳುವುದು, ಕುಡಿತದ ಚಟ ಇನ್ನಿತರ ಸಮಾಜಘಾತುಕ ಕೆಲಸಕ್ಕೆ ಇಳಿಯುವುದು ಹೆಚ್ಚಾಗಿದೆ. ಇಂತಹ ಯುವಕರಿಗೆ ಮಂಜುನಾಥ್ ಯಶೋಗಾಥೆ ಆದರ್ಶದಾಯಕವಾಗಿದೆ ಎಂದ ಅವರು ಚೇಳೂರು ಭಾಗದ 400 ರೈತರಿಗೆ ಗಂಗಾ ಕಲ್ಯಾಣ ಕೊಳವೆಬಾವಿ ಕೊರೆಸಿ ಕೊಟ್ಟಿದ್ದೇನೆ. ಸಣ್ಣ ನೀರಾವರಿ ಇಲಾಖೆ ಮೂಲಕ 120 ಬೋರ್ ವೆಲ್ ಕೊರೆಸಲಾಗಿದೆ. ಹೀಗೆ ಅನುಕೂಲ ಪಡೆದ ರೈತರು ಅಡಕೆ ಸುಲಿಯುವ ಯಂತ್ರಗಳ ಬಳಕೆ ಮಾಡಿ ಯುವಕ ಮಂಜುನಾಥ್ ಅವರನ್ನು ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.

ಮುಖಂಡ ಲಕ್ಕೇನಹಳ್ಳಿ ಕುಮಾರ್ ಮಾತನಾಡಿ ಟೊಮೋಟೊ ಬೆಳೆಯುತ್ತಿದ್ದ ಯುವ ರೈತ ಮಂಜುನಾಥ್ ಉದ್ಯಮಿಯಾಗಿ ಬೆಳೆದಿದ್ದು ರೋಚಕವಾಗಿದೆ. ಏನೂ ಅರಿಯದ ಮಂಜುನಾಥ್ ಯಂತ್ರಗಳ ತಯಾರಿಕೆಗೆ ಕೈ ಹಾಕಿ ದೊಡ್ಡ ಸವಾಲು ಎದುರಿಸುತ್ತಾರೆ. ಎರಡು ಕಂಪೆನಿ ಜೊತೆ ನಡೆಸಿದ ವ್ಯವಹಾರ ಬೇಡವೆನಿಸಿ ಬ್ಯಾಂಕ್ ಸಾಲ ಪಡೆದು ಸ್ವಂತ ಉದ್ಯಮ ಆರಂಭಿಸಿ ಹಳ್ಳಿಗಾಡಿನ ರೈತನ ಬೆಳವಣಿಗೆ ಶ್ಲಾಘನೀಯ ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ ಮಾತನಾಡಿ ಅಡಕೆ ಸುಲಿಯುವ ಯಂತ್ರ ಖರೀದಿಗೆ ಇಲಾಖೆ ಸಬ್ಸಿಡಿ ನೀಡುತ್ತದೆ. ಸಾಮಾನ್ಯ ವರ್ಗಕ್ಕೆ ಶೇಕಡಾ 40 ರಷ್ಟು ಹಾಗೂ ಎಸ್ಸಿ ಎಸ್ಟಿ ರೈತರಿಗೆ ಶೇಕಡಾ 50 ರಷ್ಟು ಸಬ್ಸಿಡಿ ಸಿಗಲಿದೆ. ಮಹಿಳಾ ಪ್ರಧಾನ ರೈತರಿಗೆ ಶೇಕಡಾ 20 ರಷ್ಟು ಸಬ್ಸಿಡಿ ಕೂಡಾ ಸಿಗಲಿದೆ. ಈ ಜೊತೆಗೆ ಇಲಾಖೆಯಲ್ಲಿ ಸಾಂಬಾರ್ ಪದಾರ್ಥ ಹಾಗೂ ಹಣ್ಣುಗಳನ್ನು ಬೆಳೆಯಲು ಸಹಾಯಧನ ಸಿಗಲಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಅತಿ ಹೆಚ್ಚು ಸಬ್ಸಿಡಿ ಸಿಗಲಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಉದ್ಯಮಿ ಮಂಜುನಾಥ್ ಮಾತನಾಡಿ ಛಲ ಹಿಡಿದು ಹಳ್ಳಿಗಾಡಿನ ರೈತರಿಗೆ ಅನುಕೂಲ ಆಗುವ ಕೆಲಸ ಮಾಡಲು ಯೋಚಿಸಿ ಅಡಕೆ ಸುಲಿಯಲು ಕೂಲಿ ಕಾರ್ಮಿಕರ ಹುಡುಕಾಟ ಬಗ್ಗೆ ಕಣ್ಣಾರೆ ಕಂಡಿದ್ದ ನನಗೆ ಯಂತ್ರಗಳ ತಯಾರಿಕೆಗೆ ಮುಂದಾಗಿ ಆಧುನಿಕತೆಗೆ ತಕ್ಕಂತೆ ರೈತರಿಗೆ ಕಡಿಮೆ ದರದಲ್ಲಿ ಸ್ಥಳೀಯವಾಗಿಯೇ ಯಂತ್ರಗಳ ನೀಡುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಶಾಸಕರಿಂದ ಎಲ್ ಟಿಎನ್ ಯಂತ್ರ ಖರೀದಿ ಮಾಡಿದ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಎಸ್ಐ ನಾಗರಾಜು, ಮುಖಂಡರಾದ ಜಿ.ವಿ.ಮಂಜುನಾಥ್, ಸಣ್ಣರಂಗಯ್ಯ, ನಾಗರಾಜು, ರೈತ ಸಂಘದ ಸಿ.ಜಿ.ಲೋಕೇಶ್, ಅರೇಹಳ್ಳಿ ಮಂಜುನಾಥ್, ಲಿಂಗಣ್ಣ, ಅಡವೀಶಯ್ಯ, ಚೇಳೂರು ಶಿವನಂಜಪ್ಪ, ರಾಮಕೃಷ್ಣಯ್ಯ, ಜಯಮ್ಮ, ಉದ್ಯಮಿ ಮಂಜುನಾಥ್ ಅವರ ತಂದೆ ನಂಜುಂಡಪ್ಪ, ತಾಯಿ ರಂಗಮ್ಮ, ಸಹೋದರ ಗಂಗಣ್ಣ, ಲಕ್ಕೇನಹಳ್ಳಿ ನರಸೀಯಪ್ಪ, ಪುಟ್ಟರಾಜು, ಪಿಡಿಓ ಪುಟ್ಟರಾಜು ಇತರರು ಇದ್ದರು.