ಹಲವು ವರ್ಷಗಳಿಂದ ಕೃಷಿ ನಡೆಸಿಕೊಂಡು ಬದುಕು ಕಟ್ಟಿಕೊಂಡ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿರುವ ಪ್ರಭಾವಿಗಳ ಮಾತಿಗೆ ಮಣೆ ಹಾಕಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹತ್ತು ಕುಟುಂಬವನ್ನು ಬೀದಿಗೆ ತಂದಿದ್ದಾರೆ. ಈ ಜಮೀನು ನಂಬಿ ಬದುಕು ಕಟ್ಟಿಕೊಂಡ ದಲಿತ ಕುಟುಂಬಕ್ಕೆ ತಾಲ್ಲೂಕು ಆಡಳಿತ ನೆರವಾಗಿ ನಿಂತು ಸ್ಥಳ ಪರಿಶೀಲಿಸಿ ಜಮೀನು ಉಳಿಸಿಕೊಡಬೇಕು ಎಂದು ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸಿಗೆರೆ ಗ್ರಾಮದ ಕಾಲೋನಿಯ ಸಂತ್ರಸ್ತ ದಲಿತ ಕುಟುಂಬ ಸದಸ್ಯರು ಅರ್ಜಿ ಮೂಲಕ ತಮ್ಮ ಅಳಲು ತೋಡಿಕೊಂಡರು.
ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿಗೆ ಬಂದ ಹಿಂಡಿಸಿಗೆರೆ ದಲಿತ ಕುಟುಂಬದ ಸದಸ್ಯರು ತಮ್ಮ ಬದುಕಿಗೆ ಅತ್ಯಗತ್ಯ ಗೋಮಾಳ ಜಮೀನು ನಮಗೆ ನೀಡಿ ಜೀವನ ಕಟ್ಟಿಕೊಡಬೇಕು. ದುರುದ್ದೇಶದಿಂದ ಕೆಲ ಪ್ರಭಾವಿಗಳು ತಮ್ಮ ಜಮೀನಿಗೆ ರಸ್ತೆ ಮಾಡಿಕೊಳ್ಳಲು ಈ ದಲಿತರ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ. ಗ್ರಾಮ ಪಂಚಾಯಿತಿ ಮೂಲಕ ಉದ್ದೇಶವಾಗಿ ಆಶ್ರಯ ಯೋಜನೆಯಡಿ ಇದೇ ಜಮೀನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ದಲಿತ ಕುಟುಂಬವನ್ನು ಅಮಾನವೀಯವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ವಾಸ್ತವ ಚಿತ್ರಣ ಪರಿಶೀಲಿಸಿ ದಲಿತರನ್ನು ಉಳಿಸಿ ಎಂದು ಸಂತ್ರಸ್ತರು ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು.
ಸರ್ವೇ ನಂಬರ್ 48 ರಲ್ಲಿನ 8.13 ಎಕರೆ ಗೋಮಾಳದಲ್ಲಿ ಐದು ದಶಕಗಳಿಂದ ಸುಮಾರು ಹತ್ತು ಕುಟುಂಬ ಬದುಕು ನಡೆಸಿದೆ. ತುಂಡು ಭೂಮಿಯಲ್ಲೇ ಕೃಷಿ ನಡೆಸುವ ಮುಗ್ಧ ದಲಿತ ಕುಟುಂಬದ ಮೇಲೆ ಇಲ್ಲಿನ ಸ್ಥಳೀಯ ಪ್ರಭಾವಿ ಮುಖಂಡರ ಕಣ್ಣು ಬಿದ್ದಿದೆ. ಪ್ರಭಾವಿಗಳ ಜಮೀನಿಗೆ ಸೂಕ್ತ ರಸ್ತೆ ಮಾಡಿಕೊಳ್ಳಲು ಈ ದಲಿತರ ಭೂಮಿ ಕಸಿದು ಆಶ್ರಯ ಹೆಸರಿನಲ್ಲಿ ಅವರ ತೋಟಕ್ಕೆ ರಸ್ತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಕ್ರಮ ಸಕ್ರಮ ಅರ್ಜಿ ಹಾಕಿ ತುಂಡು ಜಮೀನು ಉಳಿಸಿಕೊಳ್ಳುವ ಯತ್ನದಲ್ಲಿದ್ದ ಹತ್ತು ಕುಟುಂಬಕ್ಕೆ ಶಾಕ್ ನೀಡಿದ ಗ್ರಾಮ ಪಂಚಾಯಿತಿ ದಿಢೀರ್ ನಿವೇಶನ ಮಾಡಲು ಮುಂದಾಗಿರುವುದು ದಲಿತ ಕುಟುಂಬಕ್ಕೆ ಆತಂಕ ತಂದಿದೆ. ಈ ಹುನ್ನಾರಕ್ಕೆ ದಲಿತರು ಬಲಿಯಾಗದಂತೆ ತಾಲ್ಲೂಕು ಆಡಳಿತ ಕ್ರಮ ವಹಿಸಬೇಕು. ಈ ಗೋಮಾಳದಲ್ಲಿ ಮೂವರು ದಲಿತರಿಗೆ ಮಾತ್ರ ಸುಮಾರು ಒಂದು ಎಕರೆಯಷ್ಟು ಮಾತ್ರ ಪಹಣಿ ಆಗಿದ್ದು ದುರಸ್ಥಿ ಕಾರ್ಯ ಆಗಿಲ್ಲ. ಈ ಜಮೀನಲ್ಲಿ ಹಿರಿಯರ ಅಂತ್ಯ ಸಂಸ್ಕಾರ ಕೂಡಾ ನಡೆಸಲಾಗಿದೆ ಎಂದು ದಲಿತ ಮುಖಂಡ ಮಂಜುನಾಥ್ ವಾಸ್ತವಾಂಶ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ಶಿವಪ್ರಕಾಶ್ ಅವರಿಗೂ ಮನವಿ ಸಲ್ಲಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿ ದಲಿತ ಕುಟುಂಬವನ್ನು ಉಳಿಸುವಂತೆ ಮನವಿ ಮಾಡಿದರು.
ಮೂಡಲಗಿರಿ, ವೆಂಕಟೇಶಯ್ಯ, ಮಂಜುನಾಥ್, ತಿಮ್ಮಯ್ಯ, ದೊಡ್ಡಮ್ಮ, ಶಿವಕುಮಾರ್, ಸಿದ್ದಯ್ಯ, ಜಯಲಕ್ಷ್ಮಮ್ಮ, ಮಂಗಳಮ್ಮ, ಕೆಂಪಮ್ಮ, ಲಕ್ಷ್ಮಮ್ಮ, ಸ್ವಾಮಿ ಇತರರು ಇದ್ದರು.