ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕೆಂಬುದು ಅಂಬೇಡ್ಕರ್ ಅವರ ಸಂವಿಧಾನದ ಆಶಯವಾಗಿತ್ತು. ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿಯನ್ನು ಜಾರಿ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ವೆಂಕಟೇಶ್ ಒತ್ತಾಯಿಸಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೊಫೆಸರ್ ಬಿ ಕೃಷ್ಣಪ್ಪ ಅವರ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕಳೆದ 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಲಕ್ಷಾಂತರ ಜನರು ಹೋರಾಟ ಮಾಡುತ್ತಾ ಬಂದಿದ್ದಾರೆ, ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಿ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು. ಕೆಲವು ಸಮುದಾಯಗಳು ಜಾತಿಗಣತಿಯನ್ನು ವಿರೋಧಿಸುತ್ತಿವೆ. ಜಾತಿಗಣತಿ ನಡೆದರೆ ದಲಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ ಎಂದ ಅವರು ಹತ್ತು ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಶೋಷಣೆ, ದಬ್ಬಾಳಿಕೆ ನಡೆದಿತ್ತು. ಈಗ ಕೊಪ್ಪಳ ಜಿಲ್ಲಾ ನ್ಯಾಯಾಲಯ ಅವರ ಮೇಲೆ ಐತಿಹಾಸಿಕ ತೀರ್ಪು ನೀಡಿದೆ ಈ ತೀರ್ಪನ್ನು ನಾವು ಗೌರವಿಸುತ್ತೇವೆ ಹಾಗೂ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ಡಿಎಸ್ಎಸ್ ರಾಜ್ಯ ಸಮಿತಿಯ ಸಂಘಟನಾ ಸಂಚಾಲಕ ನೆಲಮಂಗಲ ಬಸವರಾಜು ಮಾತನಾಡಿ ಪ್ರೊ ಬಿ ಕೃಷ್ಣಪ್ಪನವರು ಡಿಎಸ್ಎಸ್ ಸಂಘಟನೆ ಸ್ಥಾಪಿಸುವ ಮೂಲಕ ಹೋರಾಟದ ಹಾದಿಯನ್ನು ಹಾಕಿ ಕೊಟ್ಟಿದ್ದು ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿಯವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ಸಂಘಟನೆ ಮಾಡುವ ಮೂಲಕ ಸಂಘಟನೆಗೆ ಹೆಚ್ಚಿನ ಶಕ್ತಿ ತುಂಬಬೇಕು ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಬೆಂಗಳೂರು ಜಿಲ್ಲಾ ಸಂಚಾಲಕ ರಾಮು, ತಾಲ್ಲೂಕು ಸಂಚಾಲಕ ಮಾರಶೆಟ್ಟಿಹಳ್ಳಿ ಬಸವರಾಜು,
ಬಾಬು ಜಗಜೀವನ್ ರಾಮ್ ಆದಿಜಾಂಬವ ಯುವ ಬ್ರಿಗೇಡ್ ಅಧ್ಯಕ್ಷ ಗುಬ್ಬಿ ಬಸವರಾಜು,
ಸಂಘಟನಾ ಸಂಚಾಲಕ ಹರಿವೇಸಂದ್ರ ಕೃಷ್ಣಪ್ಪ,
ಕುಂದುಕೊರೆತೆ ವಿಭಾಗ ಅಧ್ಯಕ್ಷ ಸಿ ಎಸ್ ಪುರ ಬೆಟ್ಟಸ್ವಾಮಿ, ನರೇಂದ್ರಕುಮಾರ್, ಸುರೇಶ್ ಕುಂದರನಹಳ್ಳಿ, ಶಿವರಾಜ್ ಹಂಡನಹಳ್ಳಿ, ನರಸಿಂಹಮೂರ್ತಿ ಸೇರಿದಂತೆ ಡಿಎಸ್ಎಸ್ ಮುಖಂಡರು ಹಾಜರಿದ್ದರು.