ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸ್ಥಳೀಯ ಸಂಸ್ಥೆ ಪಟ್ಟಣ ಪಂಚಾಯಿತಿ ಸೇರಿದಂತೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್, ಅನೈರ್ಮಲ್ಯ ಶೌಚಾಲಯ ಸಮೀಕ್ಷೆಯನ್ನು ಇದೇ ತಿಂಗಳ 27 ರಿಂದ ನಡೆಸಲಾಗುವುದು ಎಂದು ತಾಪಂ ಇಓ ಎಸ್.ಶಿವಪ್ರಕಾಶ್ ತಿಳಿಸಿದರು.
ನವಂಬರ್ 27 ರಿಂದ ಸಮೀಕ್ಷೆ ಆರಂಭಿಸಿ ನಂತರ ಡಿಸೆಂಬರ್ 5 ರಂದು ಅನೈರ್ಮಲ್ಯ ಶೌಚಾಲಯ ಕಂಡು ಬಂದಲ್ಲಿ ನಿರ್ವಹಣೆ ಮಾಡುವ ಮಾಲೀಕರಿಗೆ ನೋಟಿಸ್ ಜಾರಿ ಮಾಡುವುದು. ಯಾವುದೇ ಅನೈರ್ಮಲ್ಯ ಶೌಚಾಲಯ ಕಂಡು ಬರದಿದ್ದಲ್ಲಿ ಅನೈರ್ಮಲ್ಯ ಶೌಚಾಲಯ ರಹಿತ ಪ್ರದೇಶವೆಂದು ಡಿಸೆಂಬರ್ 20 ರಂದು ಘೋಷಿಸಲಾಗುವುದು ಎಂದು ತಿಳಿಸಿದರು.
2025 ರ ಜನವರಿ 5 ರಂದು ಮಲ ಸ್ವಚ್ಚ ಮಾಡುವ ವೃತ್ತಿಯಲ್ಲಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸ್ವಯಂ ಘೋಷಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಕ್ಯಾಂಪ್ ನಡೆಸಲಾಗುವುದು. 2025 ರ ಫೆಬ್ರವರಿ 10 ರಂದು ಆಯಾ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಲಾಗುವುದು. 2025 ರ ಫೆಬ್ರವರಿ 17 ರಂದು ತಾಲ್ಲೂಕಿನ ಎಲ್ಲಾ ಸ್ಥಳೀಯ ಸಂಸ್ಥೆಯಿಂದ ಅಂತಿಮ ಆಯ್ಕೆಪಟ್ಟಿ ಪಡೆದು ಜಿಲ್ಲಾ ಸಮೀಕ್ಷಾ ಸಮಿತಿಯಿಂದ ಧೃಢೀಕರಿಸಿ ರಾಜ್ಯ ಮಟ್ಟದ ಸಮೀಕ್ಷಾ ಸಮಿತಿಗೆ ಅನುಮೋದನೆಗಾಗಿ ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
