ಜಿಲ್ಲಾಧಿಕಾರಿಗಳ ಹೆಸರಿನ ಮೀಸಲು ಜಮೀನಲ್ಲಿ ನಾಲ್ಕು ಎಕರೆ ಆಶ್ರಯ ಯೋಜನೆಗೆ ಒಳಪಡಿಸಿ ತ್ಯಾಗಟೂರು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದರೂ ವಸತಿ ಹೀನರಿಗೆ ನಿವೇಶನ ಹಂಚಿಕೆ ಮಾಡಲು ಯಾವುದೇ ಕ್ರಮ ವಹಿಸದ ಪಂಚಾಯಿತಿ ಆಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ಸಾಮಾನ್ಯ ಸಭೆ ನಡೆಯುವ ವೇಳೆ ಕಚೇರಿ ಮುಂದೆ ಸಂತ್ರಸ್ತ ಅರ್ಜಿದಾರರು ತಮ್ಮ ಅಳಲು ತೋಡಿ ಕೊಂಡರು.
ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಹ ಬೊಮ್ಮರಸನಹಳ್ಳಿಯ ಸರ್ವೇ ನಂಬರ್ 101/2 ಜಮೀನು ಜಿಲ್ಲಾಧಿಕಾರಿಗಳ ಹೆಸರಿನಲ್ಲಿದೆ. ಅಭಿವೃದ್ದಿ ಕೆಲಸಕ್ಕೆ ಮೀಸಲು ಇದ್ದ ಈ ಜಮೀನಲ್ಲಿ ನಾಲ್ಕು ಎಕರೆ ವಸತಿ ಹಿನರಿಗೆ ಹಂಚಿಕೆ ಮಾಡಲು ಸೂಚಿಸಿ ಹಸ್ತಾಂತರ ಮಾಡಿದರೂ ಬಡವರಿಗೆ ನಿವೇಶನ ನೀಡಲಾಗಿಲ್ಲ ಎಂಬ ವಿಚಾರ ಪ್ರಸ್ತಾಪವಾಗಿದೆ. ಈ ಬಗ್ಗೆ ಸೂಕ್ತ ಉತ್ತರಕ್ಕಾಗಿ ಅರ್ಜಿದಾರರು ಕಾದು ಕುಳಿತು ನಂತರ ಸುದ್ದಿಗಾರರ ಜತೆ ತಮ್ಮ ಅಳಲು ತೋಡಿಕೊಂಡರು.
ದಲಿತ ಮುಖಂಡ ಈಶ್ವರಯ್ಯ ಮಾತನಾಡಿ ಹಲವು ವರ್ಷದಿಂದ ಅರ್ಜಿ ಹಾಕಿ ನಿವೇಶನಕ್ಕೆ ಕಾದು ಕುಳಿತಿದ್ದೇವೆ. ಪಂಚಾಯಿತಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಮೀಸಲು ಜಮೀನು ಪರಿವರ್ತನೆ ಮಾಡಿ ನಿವೇಶನ ವಿಂಗಡನೆ ಮಾಡಲು ಮೀನಾ ಮೇಷ ಎಣಿಸಲು ಸೂಕ್ತ ಉತ್ತರ ನೀಡಬೇಕು. ಸರ್ಕಾರ ಜಮೀನು ನೀಡಿದರೂ ಸ್ಥಳೀಯ ಸಂಸ್ಥೆ ಪಂಚಾಯಿತಿ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಗ್ರಾಪಂ ಮಾಜಿ ಅಧ್ಯಕ್ಷ ಉಮೇಶ್ ಮಾತನಾಡಿ ಜಿಲ್ಲಾಧಿಕಾರಿಗಳು ಮೀಸಲು ಜಮೀನು ವಸತಿ ಯೋಜನೆಗೆ ಒಳಪಡಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸೂಚಿಸಲಾಗಿದೆ. ಆದರೆ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಹೇಳುತ್ತಿರುವುದು ನಮ್ಮಗಳ ವಿಪರ್ಯಾಸ ಎಂದು ಅಳಲು ತೋಡಿಕೊಂಡರು.
ಸಂತ್ರಸ್ತ ಅರ್ಜಿದಾರರು ಕೂಡಲೇ ನಿವೇಶನ ಹಂಚಿಕೆ ಮಾಡಿ ಬಡವರಿಗೆ ವಸತಿ ಕರುಣಿಸಬೇಕು ಎಂದು ಮತ್ತೊಮ್ಮೆ ಆಗ್ರಹಿಸಿ ಗ್ರಾಮ ಪಂಚಾಯಿತಿಗೆ ಒತ್ತಡ ಹೇರಿದರು.
ಸಂತ್ರಸ್ತರ ಅಳಲು ಆಲಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಂಕಾರ ಪ್ರಸಾದ್ ಮಾತನಾಡಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೊಮ್ಮರಸನಹಳ್ಳಿ, ಸಾಗರನಹಳ್ಳಿ, ಕೋಡಿ ನಾಗೇನಹಳ್ಳಿ ಗ್ರಾಮದಲ್ಲಿ ನಿವೇಶನಕ್ಕೆ ಜಮೀನು ಮೀಸಲಿಟ್ಟು ಪಂಚಾಯಿತಿಗೆ ನೀಡಿದೆ. ಆದರೆ ಕೆಲ ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಜೊತೆಗೆ ಸಂಪನ್ಮೂಲ ಕೊರತೆ ಹಿನ್ನಲೆ ತಡವಾಗಿದೆ. ಭೂ ಪರಿವರ್ತನೆ ಆಗಿ ನಿವೇಶನ ಹಂಚಿಕೆ ಆಗಬೇಕು. ಸರ್ಕಾರದ ಆದೇಶ ಬಂದು ಒಂದು ತಿಂಗಳು ಆಗಿದೆ. ನಿಯಮಾನುಸಾರ ಕ್ರಮವಾಗಿ ನಡೆಯಲು ಸಮಯ ಬೇಕಿದೆ. ನ್ಯಾಯಾಲಯ ಮೆಟ್ಟಿಲೇರಿರುವ ಜಮೀನಿನಲ್ಲಿ ನಾವು ನಿವೇಶನ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.