ಗುಬ್ಬಿ ಪಟ್ಟಣದ ಹಂದಿ ಜೋಗರ ಕಾಲೋನಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅಲ್ಲಿನ ವಾಸ್ತವ ಚಿತ್ರಣ ಪರಿಶೀಲಿಸಿ ಪ್ರತಿ ಗುಡಿಸಲಿನ ಸಂತ್ರಸ್ತರ ಜೊತೆ ಚರ್ಚಿಸಿ ಎಲ್ಲಾ ಮೂಲಭೂತ ಸೌಕರ್ಯದೊಂದಿಗೆ ವಸತಿ ಕಲ್ಪಿಸುವ ಭರವಸೆ ನೀಡಿದರು.
ಗುಬ್ಬಿ ಪಟ್ಟಣದ ಪೊಲೀಸ್ ಠಾಣೆ ಹಿಂಬದಿಯ ಮಾರನಕಟ್ಟೆ ಕೆರೆಯ ಬದಿಯಲ್ಲಿ ವಾಸಿಸುವ ಅಲೆಮಾರಿ ಹಂದಿ ಜೋಗ ಸಮುದಾಯದ ಸುಮಾರು 45 ಕುಟುಂಬಗಳ ಅವ್ಯವಸ್ಥೆ ವೀಕ್ಷಣೆ ಮಾಡಿದ ಉಪ ಲೋಕಾಯುಕ್ತರು ನಿವಾಸಿಗಳ ಜೊತೆ ಮಾತನಾಡಿ ಮಳೆ ಬಂದಾಗ ಗುಡಿಸಲುಗಳು ಮುಳುಗಡೆಯಾಗುತ್ತದೆ. ಬದುಕು ಮೂರಾಬಟ್ಟೆ ಆಗಿರುವ ಬಗ್ಗೆ ತಿಳಿದುಕೊಂಡರು. ಕೆರೆಯ ದಡದಲ್ಲಿ ಎಲ್ಲಾ ಗುಡಿಸಲು, ಶೆಡ್ ಬಳಿ ತೆರಳಿ ಸಂತ್ರಸ್ತರನ್ನು ಖುದ್ದು ಮಾತನಾಡಿಸಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಸುರಕ್ಷತೆ ಇಲ್ಲದ ಈ ಸ್ಥಳದಿಂದ ಕೂಡಲೇ ಶಿಫ್ಟ್ ಮಾಡಿ ಅವರಿಗೆ ವಸತಿ ಊಟದ ವ್ಯವಸ್ಥೆಗೆ ಸೂಚಿಸಲಾಗಿತ್ತು. ಈ ಕಾರ್ಯ ಎರಡು ದಿನದ ಹಿಂದೆ ನಡೆದಿದೆ. ಆದರೆ ಕೆರೆಯ ಈ ಜಾಗದಲ್ಲಿ ಇವರು ಇರುವುದು ಸೂಕ್ತವಲ್ಲ. ಅವರನ್ನು ಕೂಡಲೇ ಮೂಲಭೂತ ಸವಲತ್ತು ಜೊತೆಯಲ್ಲಿ ವಸತಿಯನ್ನು ನಿರ್ಮಿಸಿ ಸಾತೇನಹಳ್ಳಿ ಬಳಿಯ ನಿವೇಶನಗಳತ್ತ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ವಾಸ್ತವ ಚಿತ್ರಣ ಕಂಡು ಬಳಿಕ ಸಂತ್ರಸ್ಥರೊಂದಿಗೆ ಮಾತನಾಡಿ ಅಲೆಮಾರಿ ಕುಟುಂಬಗಳಿಗೆ ಮಂಜೂರಾದ ನಾಲ್ಕು ಎಕರೆ ಜಾಗದಲ್ಲಿ 72 ನಿವೇಶನ ಹಂಚಿಕೆ ಆಗಲಿದೆ. ಈ ಪೈಕಿ ಈಗಾಗಲೇ ಗುರುತಿಸಲಾದ 65 ಕುಟುಂಬಗಳನ್ನು ಅಲ್ಲಿಗೆ ಶಿಫ್ಟ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. 15 ಮಂದಿಗೆ ಹಕ್ಕುಪತ್ರ ನೀಡಲಾಗಿದ್ದು, ಉಳಿದವರಿಗೂ ಹಕ್ಕುಪತ್ರ ಸಿಗಲಿದೆ. ಹಂತ ಹಂತವಾಗಿ ಎಲ್ಲಾ ಸಂತ್ರಸ್ತ ಕುಟುಂಬ ಶಿಫ್ಟ್ ಮಾಡಿ ಕೆರೆಯ ಜಾಗವನ್ನು ಕೆರೆಯಾಗಿ ಉಳಿಸುವುದಾಗಿ ತಿಳಿಸಿದ ಅವರು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ಚಿಂತಿಸಿ ಕೂಡಲೇ ವಸತಿ ಶಾಲೆಗೆ ಮಕ್ಕಳನ್ನು ಸೇರಿಸಿ ಶಿಕ್ಷಣ ನೀಡಬೇಕು. ಇಲ್ಲಿನ ಮಕ್ಕಳಿಗೆ ವಸತಿ ಶಾಲೆಗೆ ಸೇರಿಸಲು ತಹಶೀಲ್ದಾರ್ ಅವರಿಗೆ ಸೂಚಿಸಿದ್ದೇವೆ ಎಂದರು.

ಸಂತ್ರಸ್ತ ಹಂದಿ ಜೋಗರ ಕುಟುಂಬದ ಜೊತೆ ತೆಲುಗಿನಲ್ಲೇ ಮಾತನಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಎಲ್ಲರಿಗೂ ನಿವೇಶನ ಹಂಚಿ ವಸತಿ ಕಲ್ಪಿಸುವ ಭರವಸೆ ನೀಡಿ ನಂತರ ಸಂತ್ರಸ್ತರಿಗೆ ವಸತಿ ಊಟ ವ್ಯವಸ್ಥೆ ಮಾಡಿದ್ದ ಬಾಬು ಜಗಜೀವನ ರಾಂ ಭವನಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದರು. ನಂತರ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ವಚ್ಚತೆ, ಉಗ್ರಾಣ, ವಾರ್ಡ್ ಗಳ ಸ್ಥಿತಿ, ವೈದ್ಯರು ಹಾಗೂ ರೋಗಿಗಳ ಜೊತೆ ಮಾತನಾಡಿ ಅಗತ್ಯ ಸೌಕರ್ಯ ಬಗ್ಗೆ ಚರ್ಚಿಸಿ ನೇರ ಸಾತೇನಹಳ್ಳಿ ಬಳಿಯ ಹಂದಿ ಜೋಗರಿಗೆ ಮೀಸಲಿಟ್ಟ ನಿವೇಶನಗಳ ಜಾಗಕ್ಕೆ ತೆರಳಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜಯಂತ್ ಕುಮಾರ್, ನೂರುನ್ನೀಸಾ, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ಬಿ.ಆರತಿ, ತಾಪಂ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.
