ದೇವನಹಳ್ಳಿ ಚನ್ನರಾಯಪಟ್ಟಣ ರೈತರ ಸಾವಿರ ದಿನಗಳ ಹೋರಾಟಕ್ಕೆ ಕೊನೆಗೂ ಮಹತ್ವದ ಜಯ ದೊರಕಿದೆ. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟಿರುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ ಹಿನ್ನಲೆ ಗುಬ್ಬಿ ಪಟ್ಟಣ ಬಸ್ ಸ್ಟ್ಯಾಂಡ್ ಬಳಿ ರೈತ ಸಂಘದ ಪದಾಧಿಕಾರಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ರೈತರ ಹೋರಾಟ ಎಂದಿಗೂ ಗಟ್ಟಿತನ ಬೆಳೆಸಿಕೊಂಡಿದೆ. ರೈತರು ತಮ್ಮ ಕೃಷಿ ಭೂಮಿ ಬಿಟ್ಟು ಕೊಡುವುದಿಲ್ಲ. ನಿರಂತರ 1200 ದಿನಗಳ ಸುಧೀರ್ಘ ಹೋರಾಟ ಎಲ್ಲೂ ದಿಕ್ಕು ತಪ್ಪದೆ ನಡೆಸಿದ್ದರ ಫಲ ಸರ್ಕಾರ ರೈತರ ಮುಂದೆ ಸೋತಿದೆ. ಕೆ ಐಡಿಬಿಎಲ್ ಮೂಲಕ ಭೂಮಿ ವಶಕ್ಕೆ ಪಡೆಯಲು ಮುಂದಾದಾಗ ರೈತರ ವಿರೋಧ ವ್ಯಕ್ತಪಡಿಸಿದ್ದರು. ಹೋರಾಟದ ತೀವ್ರತೆ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ ರೈತ ಪರ ನಿರ್ಧಾರ ಕೈಗೊಂಡಿದ್ದಾರೆ. ಈ ರೀತಿಯ ದಿಟ್ಟ ಹೋರಾಟ ನಮ್ಮ ಜಿಲ್ಲೆಯಲ್ಲಿ ಹೇಮಾವತಿ ನೀರಿಗಾಗಿ ನಡೆಯಬೇಕಿದೆ. ಇಲ್ಲಿಯೂ ರೈತರು ಇದೇ ಮಾದರಿ ಅನುಸರಿಸಿ ಯಾವುದೇ ಬೆದರಿಕೆಗೆ ಅಂಜದೆ ನಿರಂತರ ಹೋರಾಟ ನಡೆಸಿ ಹೋರಾಟ ಸಫಲ ಗೊಳಿಸಬೇಕಿದೆ. ಹೇಮಾವತಿ ಲಿಂಕ್ ಕೆನಾಲ್ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕೆಲಸ ನಡೆಯಲಿದೆ ಎಂದಿರುವುದು ಸರಿಯಲ್ಲ. ಈ ಹೇಳಿಕೆ ಹಿಂಪಡೆದು ಜಿಲ್ಲೆಯ ರೈತರ ಪರ ನಿಲ್ಲಬೇಕು ಎಂದು ಒತ್ತಾಯಿಸಿದ ಅವರು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ 1198 ದಿನಗಳ ಹೋರಾಟಕ್ಕೆ ಅಂತಿಮವಾಗಿ ಐತಿಹಾಸಿಕ ಜಯ ಸಿಕ್ಕಿದ್ದು, ಇಂದು ರೈತರೊಂದಿಗೆ ನಡೆದ ಸಭೆಯಂತೆ ನಮ್ಮ ಜಿಲ್ಲೆಯಲ್ಲಿ ರೈತ ಮುಖಂಡರ ಸಭೆ ನಡೆಸಿದರೆ ಹೇಮಾವತಿ ವಿಚಾರ ಮನದಟ್ಟು ಮಾಡುತ್ತೇವೆ ಎಂದರು.

ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ದೇವನಹಳ್ಳಿ ಚನ್ನರಾಯಪಟ್ಟಣ ರೈತರ ದಿಟ್ಟತನಕ್ಕೆ ಸರ್ಕಾರ ಮಂಡಿಯೂರಿದೆ. ಸಿಎಂ ನೇತೃತ್ವದ ಸಭೆಯಲ್ಲಿ ಸರ್ಕಾರ 13 ಹಳ್ಳಿಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ. 1198 ದಿನಗಳ ಇಂತಹ ಹೋರಾಟ ನಮ್ಮ ಜಿಲ್ಲೆಯಲ್ಲಿ ಕಾಣುತ್ತಿಲ್ಲ. ರೈತರ ಜೀವನಾಡಿ ಹೇಮಾವತಿ ನೀರು ನಮ್ಮಿಂದ ಕೈ ಬಿಡುತ್ತಿದೆ. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳಲ್ಲೇ ಒಮ್ಮತ ಮೂಡುತ್ತಿಲ್ಲ. ರೈತರೇ ದೇವನಹಳ್ಳಿ ಹೋರಾಟವನ್ನೇ ಮುಂದಿಟ್ಟುಕೊಂಡು ದಿಟ್ಟ ಹೋರಾಟಕ್ಕೆ ಮುಂದಾಗಿ ಹೋರಾಟ ನಡೆಸಬೇಕಿದೆ. ಸರ್ಕಾರವೇ ರೈತರ ಒಕ್ಕೊರಲಿನ ಆಗ್ರಹಕ್ಕೆ ಮಣಿಯಬೇಕಿದೆ. ನಾವು ಹೇಮಾವತಿ ಉಳಿಸಲು ಈ ಮಾದರಿಯಲ್ಲೇ ಹೋರಾಟ ನಡೆಸೋಣ. ಸರ್ಕಾರದ ಗಮನ ಸೆಳೆದು ಇದೇ ರೀತಿ ಸಭೆಯಲ್ಲಿ ಕಾಮಗಾರಿ ರದ್ದು ಮಾಡಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ರೈತ ಮುಖಂಡರಾದ ಕಾಳೆಗೌಡ, ಗಂಗರೇವಣ್ಣ, ದೇವೇಗೌಡ, ಬಡವನಪಾಳ್ಯ ಕುಮಾರಸ್ವಾಮಿ, ನಾಗರಾಜು, ಸತ್ತಿಗಪ್ಪ, ಬಸವರಾಜು, ಸಣ್ಣಪ್ಪ, ಯತೀಶ್, ಎ.ಎಸ್.ಬಸವರಾಜು ಇತರರು ಇದ್ದರು.