ಜಮೀನು ಮಂಜೂರು ಮಾಡಿಸುವ ಆಮಿಷ ತೋರಿಸಿ ಮುಗ್ಧ ರೈತರನ್ನು ವಂಚಿಸಿ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕೆಲ ಸಂಘಗಳು ಮುಂದಾಗಿವೆ. ಈಗಾಗಲೇ ಯಾವುದೇ ದಾಖಲೆ ಇಲ್ಲದ ಆರು ಸಾವಿರ ಅರ್ಜಿಗಳನ್ನು ತಾಲ್ಲೂಕು ಕಚೇರಿಗೆ ನೀಡಿದ್ದಾರೆ. ಇದೆಲ್ಲಾ ಫೇಕ್ ಅರ್ಜಿಗಳು. ಯಾವುದೇ ಕಾರಣಕ್ಕೂ ಮರುಳಾಗಬೇಡಿ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು 1998-99 ರ ಸುಪ್ರೀಂ ಕೋರ್ಟ್ ಆದೇಶದಂತೆ ನೂರು ಜಾನುವಾರು ಇರುವ ಹಳ್ಳಿಗೆ 33 ಎಕರೆ ಗೋಮಾಳ ಜಮೀನು ಮೀಸಲು ಇರಬೇಕಿದೆ. ಈ ಗೈಡ್ ಲೈನ್ ಪ್ರಕಾರ ತಾಲ್ಲೂಕಿನಲ್ಲಿ ಗೋಮಾಳ ಜಮೀನು ಮಂಜೂರು ಮಾಡಲು ಅಸಾಧ್ಯವಾಗಿದೆ. ಸರ್ಕಾರ ಈಗ ಯಾವುದೇ ಅರ್ಜಿ ಆಹ್ವಾನಿಸಿಲ್ಲ. ವಸ್ತು ಸ್ಥಿತಿ ಅರಿತು ರೈತರು ವರ್ತಿಸಬೇಕು. ಕೆಲ ಸಂಘಗಳು ಅವರ ನಿಲುವು ಉಳಿಸಿಕೊಳ್ಳಲು ಮುಗ್ಧ ರೈತರನ್ನು ಪ್ರತಿಭಟನೆಗೆ ಇಳಿಸುತ್ತಾರೆ. ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿದರು.
ಬಗರ್ ಹುಕುಂ ಸಮಿತಿ ಮೂಲಕ ಈಗಾಗಲೇ 1991-92 ರ 50 ಅರ್ಜಿ ನಮೂನೆಯಲ್ಲಿ ಆರು ಸಾವಿರ ಅರ್ಜಿಗಳಿವೆ. 1997-98 ರ 53 ಅರ್ಜಿ ನಮೂನೆಯಲ್ಲಿ 4800 ಅರ್ಜಿ ಹಾಗೂ 2018-19 ರ 57 ಅರ್ಜಿ ನಮೂನೆಯಲ್ಲಿ 28 ಸಾವಿರ ಅರ್ಜಿ ಇದ್ದು ಅವುಗಳನ್ನು ಇತ್ಯರ್ಥ ಮಾಡುವುದೇ ಕಷ್ಟ ಎನಿಸಿರುವಾಗ ಬಗರ್ ಸಮಿತಿಯಲ್ಲಿ ಸಿಂಧು ಆಗದ ರೈತ ಸಂಘದ ಅರ್ಜಿ ಹೇಗೆ ಸಿಂಧು ಮಾಡುವುದು ಎಂಬ ಆಲೋಚನೆ ರೈತರು ಮಾಡಬೇಕು. ತಹಶೀಲ್ದಾರ್ ಅವರ ಕರ್ತವ್ಯ ಮೀರಿ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಸರ್ಕಾರದ ಅರ್ಜಿಗೆ ಹಲವು ನಿಯಮ ಇರುವಾಗ ಖಾಸಗಿ ಸಂಘ ಏನೂ ಮಾಡಲು ಸಾಧ್ಯ ಎಂದು ವಿವರಿಸಿದರು.
ನಂತರ ಪ್ರಾಂತ ರೈತ ಸಂಘದ ಹೆಸರಿನ ದಾಖಲೆ ಇಲ್ಲದ ಅರ್ಜಿ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದಿಂದಲೂ ಬಂದಿದೆ. ವಿಳಾಸ ಇಲ್ಲ. ಹಿಂದೆ ಸಲ್ಲಿಸಿದ್ದ ಅರ್ಜಿ ನಕಲು ಇಲ್ಲ. ಆಧಾರ್ ಕಾರ್ಡ್ ಇಲ್ಲ, ಕೇವಲ ಅರ್ಜಿ ಮುಖ್ಯಮಂತ್ರಿಗೆ ಸಲ್ಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಅರ್ಜಿಗಳನ್ನು ಪ್ರದರ್ಶಿಸಿದರು.