ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಕ್ರೀಡಾರತ್ನ ಪ್ರಶಸ್ತಿ ಪಡೆದ ಅಂತರಾಷ್ಟ್ರೀಯ ಕೊಕ್ಕೋ ಆಟಗಾರ ಮುನೀರ್ ಪಾಷ ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿ ಕಾದು ಸಾಕಾಗಿ ತನ್ನ ನಿರಾಸೆ ಹಾಗೂ ಆಕ್ರೋಶವನ್ನು ವ್ಯಕ್ತ ಪಡಿಸಲು ಏಕಾಂಗಿ ಸೈಕಲ್ ಜಾಥಾ ಆರಂಭಿಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
ಭದ್ರಾವತಿ ನಿವಾಸಿ 34 ವರ್ಷ ವಯೋಮಾನದ ಮುನೀರ್ ಪಾಷ ಭದ್ರಾವತಿಯಿಂದ ಬೆಂಗಳೂರುವರೆಗೆ ಸೈಕಲ್ ಜಾಥಾವನ್ನು ನಾಲ್ಕು ದಿನದ ಹಿಂದೆ ಆರಂಭಿಸಿ ಗುರುವಾರ ಸಂಜೆ ಗುಬ್ಬಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ ಹಿನ್ನಲೆ ಪಟ್ಟಣದ ಸರ್ಕಲ್ ಬಳಿ ಕೊಕ್ಕೋ ಕ್ರೀಡಾಪಟುಗಳು ಹಾಗೂ ಹಿರಿಯ ಆಟಗಾರರು ಆತ್ಮೀಯ ಸ್ವಾಗತ ಕೋರಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಚಿಕ್ಕ ವಯಸ್ಸಿನಿಂದ ಉತ್ತಮ ಕ್ರೀಡಾಪಟು ಎನಿಸಿ ಕೊಕ್ಕೋ ಆಟದಲ್ಲಿ ತನ್ನದೇ ವರ್ಚಸ್ಸು ಬೆಳೆಸಿಕೊಂಡ ಮುನೀರ್ ಪಾಷ ಕೊಕ್ಕೋ ಆಟದಲ್ಲಿ ಎಷ್ಯಾಡ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿ ಕೊಕ್ಕೋ ಆಟದ ಉತ್ತಮ ಕ್ರೀಡಾಪಟು ಎಂದು ಗುರುತಿಸಿಕೊಂಡು ಇಡೀ ರಾಜ್ಯಕ್ಕೆ ಖ್ಯಾತಿ ತಂದು ಕೊಟ್ಟಿದ್ದರು. ನಂತರ ಕೊಕ್ಕೋ ಕ್ರೀಡೆಯಲ್ಲಿ 2017 ರಲ್ಲಿ ಕ್ರೀಡಾರತ್ನ ಪ್ರಶಸ್ತಿ ಪಡೆದರು. 2021 ಏಕಲವ್ಯ ಪ್ರಶಸ್ತಿ ಪಡೆದು ಹೆಮ್ಮೆಯ ಆಟಗಾರ ಎನಿಸಿದರು.
ಭದ್ರಾವತಿಯ ನಗರಸಭೆಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿರುವ ಈ ಏಕಲವ್ಯ ಪ್ರಶಸ್ತಿ ಪುರಸ್ಕೃತ ಮುನೀರ್ ಪಾಷ ಸರ್ಕಾರಿ ಹುದ್ದೆ ಕನಸು ಕಟ್ಟಿಕೊಂಡಿದ್ದರು. 34 ವರ್ಷ ವಯಸ್ಸಿನಲ್ಲಿ ತನ್ನ ಬಿಎ ಪದವಿ ಹಿಡಿದು ಉದ್ಯೋಗಕ್ಕಾಗಿ ಅಂಗಲಾಚಿ ಬೇಸತ್ತು ಕೊನೆಯಲ್ಲಿ ತನ್ನ ನಿರಾಸೆಯನ್ನು ಸೈಕಲ್ ಜಾಥಾ ಮಾಡುವ ಮೂಲಕ ತನ್ನ ಆಸೆ ಕೈಗೂಡುವುದೇ ಎಂದು ಬೆಂಗಳೂರಿನತ್ತ ಹೊರಟಿದ್ದಾರೆ.
ಮುನೀರ್ ಪಾಷ ಅವರನ್ನು ಗುಬ್ಬಿಯಲ್ಲಿ ಸನ್ಮಾನಿಸಿ ಜಾಥಾ ಹೋರಾಟ ಯಶಸ್ವಿ ಆಗಲೆಂದು ಹಾರೈಸಿದ ಹಿರಿಯ ಕೊಕ್ಕೋ ಆಟಗಾರ ಸಿದ್ದಲಿಂಗಸ್ವಾಮಿ ಮಾತನಾಡಿ ಗ್ರಾಮೀಣ ಕ್ರೀಡೆ ಕೊಕ್ಕೋ ಆಟಕ್ಕೆ ಪ್ರೋತ್ಸಾಹ ದೊರೆಯಬೇಕಿದೆ. ದೈಹಿಕ ಆರೋಗ್ಯದ ಈ ಆಟದಲ್ಲಿ ಕ್ರೀಡಾ ಕೋಟಾದಡಿ ಉದ್ಯೋಗ ನೀಡಬೇಕಿದೆ. ಏಕಲವ್ಯ ಪ್ರಶಸ್ತಿ ಪಡೆದ ಆಟಗಾರನ ಪಾಡು ಹೀಗೆ ಆದಲ್ಲಿ ಮುಂದಿನ ಪೀಳಿಗೆ ಕ್ರೀಡೆ ಆಸಕ್ತಿ ಕಳೆದುಕೊಳ್ಳುತ್ತಾರೆ ಎಂದು ಗ್ರಾಮೀಣ ಕ್ರೀಡಾಪಟುಗಳ ಪರ ಮಾತನಾಡಿದರು.
ಗುಬ್ಬಿಯ ಕೊಕ್ಕೋ ಆಟಗಾರರಾದ ಮಲ್ಲಿಕ್, ಜಿ.ಡಿ.ಭರತ್, ದೈಹಿಕ ಶಿಕ್ಷಕ ಗಿರೀಶ್, ಎಚ್.ಎಸ್.ಗಜ, ವರುಣ್, ಮಧು, ವಾಸು, ಪ್ರಬುದ್ಧ, ಹೇಮಂತ್ ಇತರರು ಇದ್ದರು.