ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಯಡವನಳ್ಳಿ ಮಜರೆ ಕಡೆಕೋಡಿಪಾಳ್ಯ ಗ್ರಾಮದ ಶ್ರೀ ಹನುಮಂತ ದೇವರು ಹಾಗೂ ಶ್ರೀ ತಿರುಮಲೇಶ್ವರಸ್ವಾಮಿಯ ನೂತನ ಶಿಲಾ ದೇಗುಲ, ಶಿಲಾಬಿಂಬ, ವಿಮಾನಗೋಪುರ ಕಳಸ ಪ್ರತಿಷ್ಠಾಪನೆ ಹಾಗೂ ಹಾಗೂ ಶಿಲಾ ದೇಗುಲ ಉದ್ಘಾಟನೆ ಪ್ರಯುಕ್ತ ಶ್ರೀ ಶಕ್ತಿ ಆಂಜನೇಯಸ್ವಾಮಿಯಯನ್ನು ತುಮಕೂರಿನ ಲಕ್ಷ್ಮಿ ಆನೆಯ ಮೇಲೆ ಕೂರಿಸಿ ಅಂಬಾರಿ ಉತ್ಸವವನ್ನು ಊರಿನ ಪ್ರಮುಖ ರಾಜ ಬೀದಿಗಳಲ್ಲಿ ವೈಭವಯುತವಾಗಿ ನಡೆಸಲಾಯಿತು.
ನಂದಿಧ್ವಜ ಕುಣಿತ, ಲಿಂಗದವೀರರ ಕುಣಿತ, ಹಾಗೂ ಮಂಗಳವಾದ್ಯ ಕಲಾತಂಡಗಳೊಂದಿಗೆ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನಡೆದ ಅಂಬಾರಿ ಉತ್ಸವ ಜೊತೆ ಶ್ರೀ ಸಿದ್ದರಾಮೇಶ್ವರಸ್ವಾಮಿ, ಚಿಕ್ಕಪುರದಮ್ಮ, ಆಂಜನೇಯಸ್ವಾಮಿ, ದಂಡಿನಮಾರಮ್ಮ, ಕೊಲ್ಲಾಪುರದಮ್ಮ, ಲಕ್ಷ್ಮೀದೇವರು, ಮಾರಮ್ಮ ದೇವರುಗಳ ಪಲ್ಲಕ್ಕಿ ಉತ್ಸವ ಕೂಡ ಒಟ್ಟಾಗಿ ಜರುಗಿದ್ದು ವಿಶೇಷ ಎನಿಸಿತು.

ಗ್ರಾಮದ ಮುಖಂಡ ಹಾಗೂ ಗುಡಿಗೌಡ ಭಾನುಪ್ರಕಾಶ್ ಮಾತನಾಡಿ ಶ್ರೀ ಹನುಮಂತದೇವರು ಹಾಗೂ ತಿರುಮಲೇಶ್ವರಸ್ವಾಮಿ ದೇವಸ್ಥಾನ ಲೋಕಾರ್ಪಣೆಯ ಅಂಗವಾಗಿ ಕಳೆದ ಎರಡು ದಿನಗಳಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು ಏಳು ದೇವರುಗಳ ಸಹಿತ ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಶಕ್ತಿ ಆಂಜನೇಯಸ್ವಾಮಿಯ ವಿಶೇಷ ಆನೆ ಅಂಬಾರಿ ಉತ್ಸವ ನಡೆಸುತ್ತಿದ್ದೇವೆ. ಸಹಸ್ರಾರು ಭಕ್ತರು ಈ ಅಂಬಾರಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಹಾಗೂ ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಉತ್ಸವದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್, ಚುನಾಯಿತ ಪ್ರತಿನಿಧಿಗಳು, ಮುಖಂಡರು ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.