ಜಾಗತೀಕ ವಾತಾವರಣಕ್ಕೆ ಪರಿಸರ ಅಸಮತೋಲನವಾಗಿದೆ. ತಂತ್ರಜ್ಞಾನ ಬೆಳೆದಂತೆ ಪ್ರಕೃತಿ ಕೂಡಾ ಬದಲಾವಣೆಗೊಳ್ಳುತ್ತಿದೆ. ಮನುಷ್ಯ ಪ್ರಸ್ತುತ ಪರಿಸರದಲ್ಲಿ ಉಳಿಯಬೇಕಾದರೆ ಪರಿಸರ ಸಂರಕ್ಷಣೆ ಅತ್ಯಗತ್ಯ. ಇಂದಿನ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಪ್ರತಿ ಮಕ್ಕಳು ಎರೆಡೆರಡು ಸಸಿ ನೆಟ್ಟು ಪೋಷಿಸಬೇಕು ಎಂದು ಮೀಡಿಯಾ ಬ್ಯಾಕ್ ಆಫೀಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ರಘು ತಿಳಿಸಿದರು.
ಪಟ್ಟಣದ ಎಂ.ಜಿ.ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಮ್ಮ 47 ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆ ವಿಶ್ವ ಪರಿಸರ ದಿನಾಚರಣೆ ಜೊತೆಗೆ ವಿವಿಧ ಸಸಿಗಳನ್ನು ನೆಟ್ಟು ಮಾತನಾಡಿದ ಅವರು ಅರಣ್ಯ ಸಂಪತ್ತು ವಿನಾಶದಂಚಿಗೆ ಬಂದಿರುವ ಕಾರಣ ಹಸಿರು ಕ್ರಾಂತಿ ಎಲ್ಲೆಡೆ ಆಗಬೇಕಿದೆ. ಶೇಕಡಾ 33 ಅರಣ್ಯ ಸಂಪತ್ತು ಅತ್ಯವಶ್ಯವಿದ್ದು, ಇನ್ನೂ ಶೇಕಡಾ 19 ರಷ್ಟು ಮಾತ್ರ ಅರಣ್ಯ ಉಳಿಸಿದ್ದೇವೆ ಎಂದರು.
ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬ ನಾಗರೀಕ ಗಿಡ ಬೆಳೆಸಿ ಪೋಷಿಸುವ ಹೊಣೆ ಹೊರಬೇಕು. ಹುಟ್ಟುಹಬ್ಬದ ಸವಿ ನೆನಪಿಗೆ ಸಸಿ ನೆಡುವ ಕೆಲಸ ಮಾಡಿದ ರಘು ಅವರ ಸಾಮಾಜಿಕ ಕೆಲಸ ಮೆಚ್ಚುವಂತದ್ದು. ಪರಿಸರ ಬಗ್ಗೆ ಮಕ್ಕಳಿಗೆ ವರ್ಷಪೂರ್ತಿ ವಿವರಿಸಿ ಜಾಗೃತಿ ಮೂಡಿಸಬೇಕಿದೆ ಎಂದರು.
ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ ಪರಿಸರ ಎಂದರೆ ಹಸಿರು ಉಳಿಸುವ ನಮ್ಮ ಸುತ್ತಲಿನ ಮಾಲಿನ್ಯ ಕೂಡಾ ಸ್ವಚ್ಚವಾಗಿರಬೇಕು. ಮನೆಯ ವಾತಾವರಣ ಸುಂದರವಾಗಿ ಇಟ್ಟುಕೊಳ್ಳುವ ಜನರು ತಮ್ಮ ಕಚೇರಿ, ದೇವಸ್ಥಾನ, ಶಾಲೆ, ಕಾಲೇಜು, ಪಾರ್ಕ್, ರಸ್ತೆ, ಚರಂಡಿ ಕೂಡಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇದು ನಾಗರೀಕರ ಜವಾಬ್ದಾರಿ ಆಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ರಘು ಅವರ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಮಕ್ಕಳಿಗೆ ಹಂಚಲಾಯಿತು. ಮುಖಂಡರಾದ ಸುರುಗೇನಹಳ್ಳಿ ರಂಗನಾಥ್, ಮಹಾಲಿಂಗಯ್ಯ, ಸತೀಶ್, ರಘು, ಚಿಕ್ಕರಾಜು, ಜಿ.ಎಸ್.ಮಂಜುನಾಥ್, ಮನೋಹರ್, ಸ್ಟ್ಯಾಂಪ್ ವೆಂಡರ್ ನರಸಿಂಹಮೂರ್ತಿ ಇತರರು ಇದ್ದರು.