ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸ ಕೆಲವರು ನಡೆಸುವ ನಿದರ್ಶನ ಸಾಕಷ್ಟಿದೆ. ಆದರೆ ಚಿಕ್ಕ ಚಂಗಾವಿ ರೈತ ಪ್ರಕಾಶ್ ಅವರು ತಮ್ಮ ಹಿರಿಯರು ಭೂ ದಾನ ಮಾಡಿ ಕಟ್ಟಿಸಿದ್ದ ಸರ್ಕಾರಿ ಶಾಲೆಯನ್ನು ಉಳಿಸಲು ಮಕ್ಕಳ ದಾಖಲಾತಿ ಹೆಚ್ಚಿಸಿ ತಮ್ಮ ವೈಯಕ್ತಿಕ ಹಣದಲ್ಲಿ ಸುಸಜ್ಜಿತ ಕೊಠಡಿ ನಿರ್ಮಿಸಿದ್ದು ಶೈಕ್ಷಣಿಕ ಸೇವೆಯಲ್ಲಿ ವಿಶೇಷ ಎನಿಸಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚಿಕ್ಕ ಚಂಗಾವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿ ರೈತ ಸಿ.ಕೆ.ಪ್ರಕಾಶ್ ನಿರ್ಮಿಸಿದ ನೂತನ ಶಾಲಾ ಕೊಠಡಿ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು ಬಡ ಮಕ್ಕಳ ಶಿಕ್ಷಣದ ಕಾಳಜಿ ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ. ಕೃಷಿ ಚಟುವಟಿಕೆಯಲ್ಲಿ ಶ್ರಮಿಸಿ ದುಡಿದ ಹಣವನ್ನು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಳಸಿರುವುದೇ ಅವರ ವಿಶಾಲ ಮನೋಭಾವ ತೋರುತ್ತದೆ ಎಂದರು.
ದುಡಿಮೆಯ ಒಂದಂಶ ಸಾಮಾಜಿಕ ಕಳಕಳಿಗೆ ಬಳಸುವ ಮಂದಿ ಕೆಲವರು ಕಾಣುತ್ತಾರೆ. ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಈ ಭಾಗದಲ್ಲಿ ಸಹ ಕೆಲ ಗ್ರಾಮದ ಶಾಲೆ ಮುಚ್ಚಿದ್ದು ಕಂಡು ಮಕ್ಕಳ ದಾಖಲಾತಿ ಕುಸಿಯದಂತೆ ತಮ್ಮೂರಿನ ಶಾಲೆಗೆ ಪಕ್ಕದ ಹಳ್ಳಿಯಿಂದ ಆಟೋ ಮೂಲಕ ನಿತ್ಯ ಮಕ್ಕಳನ್ನು ಕರೆ ತರುವ ಕೆಲಸವನ್ನು ಪ್ರಕಾಶ್ ಮಾಡಿರುವುದು ಶ್ಲಾಘನೀಯ. ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಇಂತಹ ವ್ಯಕ್ತಿಗಳ ಸಹಕಾರ ಅತ್ಯಗತ್ಯ ಎಂದ ಅವರು ಕನ್ನಡ ಶಾಲೆಗಳನ್ನು ಗ್ರಾಮೀಣ ಭಾಗದಲ್ಲಿ ಗಟ್ಟಿಗೊಳಿಸುವ ಕೆಲಸ ಎಲ್ಲರೂ ಸೇರಿ ಮಾಡಿದಲ್ಲಿ ಖಾಸಗಿ ಶಾಲೆಗಳ ವ್ಯಾಮೋಹ ತಾನಾಗಿಯೇ ಕಡಿಮೆ ಆಗುತ್ತದೆ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ ಕನ್ನಡ ಶಾಲೆಗಳಿಗೆ ಬೀಗ ಜಡಿದ ಪ್ರಕರಣಗಳು ಪ್ರತಿ ವರ್ಷ ಕೇಳುತ್ತಿದ್ದು ಬಹಳ ಬೇಸರ ಮೂಡಿತ್ತು. ಈ ಮಧ್ಯೆ ಹರ್ಷದಾಯಕ ಕೆಲಸ ರೈತ ಪ್ರಕಾಶ್ ಮಾಡಿದ್ದಾರೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿ ವರ್ಷ ನಡೆಸಿ 60 ವರ್ಷದ ಶಾಲೆಯನ್ನು ತಮ್ಮೂರಿನಲ್ಲಿ ಉಳಿಸಿದ್ದಾರೆ. ಜಿಲ್ಲೆಯಲ್ಲಿ 20 ಶಾಲೆ ಮುಚ್ಚುವ ದುಸ್ಥಿತಿಯಲ್ಲಿದೆ. ಪಾವಗಡ, ಮಧುಗಿರಿ, ಕೊರಟಗೆರೆ ಈ ಭಾಗದಲ್ಲಿ ಅತಿ ಹೆಚ್ಚು ಹೊಡೆತ ಶಾಲೆಗೆ ಬಿದ್ದಿದೆ ಎಂದು ವಿಷಾದಿಸಿದ ಅವರು ಶಾಲೆಯ ನಿರ್ಮಾಣ ದೇವಾಲಯ ಕಟ್ಟಿದಂತೆ ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ನಂತರ ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕ ಮಸಾಲಾ ಜಯರಾಮ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮುಖಂಡ ನಂಜೇಗೌಡ, ಬೋರಲಿಂಗಯ್ಯ, ತಾಪಂ ಮಾಜಿ ಅಧ್ಯಕ್ಷೆ ವೇದಾವತಿ ಪ್ರಕಾಶ್, ಎಸ್ ಡಿಎಂಸಿ ಅಧ್ಯಕ್ಷ ಹರೀಶ್, ಗ್ರಾಪಂ ಸದಸ್ಯ ದೇವರಾಜ್, ಮಾಜಿ ಅಧ್ಯಕ್ಷ ನಾರಾಯಣ, ಸ್ಥಳೀಯರಾದ ಸೋಮಶೇಖರ್, ಶ್ರೀನಿವಾಸ್ ಗೌಡ, ಮನು ಇತರರು ಇದ್ದರು.