ಗುಬ್ಬಿ ತಾಲ್ಲೂಕಿನ ರೈತರ ಜೀವನಾಡಿ ಹೇಮಾವತಿ ನೀರು ಬೇರೆಡೆಗೆ ಕೊಂಡೊಯ್ಯುವ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಹೋರಾಟದಿಂದ ಸ್ಥಗಿತಗೊಳಿಸಲಾಗಿತ್ತು. ಆದರೆ ಕಳೆದೆರಡು ದಿನದಿಂದ ಮಳೆಯಲ್ಲೇ ಕೆನಾಲ್ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲು ಪೈಪ್ ತಂದಿದ್ದಾರೆ. ರೈತರಿಗೆ ಮರಣ ಶಾಸನವಾಗುವ ಈ ಲಿಂಕ್ ಕೆನಾಲ್ ಕೆಲಸ ಮಾಡದಂತೆ ರೈತರು ಒಗ್ಗೂಡಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಕರೆ ನೀಡಿದರು.
ಗುಬ್ಬಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಲಿಂಕ್ ಕೆನಾಲ್ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದ ನಮ್ಮ ಶಾಸಕರು ಡೈರಿ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಸರ್ಕಾರದ ಜೊತೆ ಏನು ಮಾತನಾಡಿದ್ದಾರೆ ಎಂಬುದು ತಿಳಿದಿಲ್ಲ. ಕೂಡಲೇ ತಾಲ್ಲೂಕಿನ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು.
ಕಾಮಗಾರಿ ಮರು ಆರಂಭಿಸಲು ಸಜ್ಜಾದ ಸರ್ಕಾರ ರೈತರನ್ನು ಕಡೆಗಣಿಸಿದೆ. ಇಲ್ಲಿನ ಸಾವಿರಾರು ರೈತರ ಮಾರಣ ಹೋಮ ನಡೆಸಿ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಸಿದ್ದವಿದ್ದಾರೆ. 10 ಟಿಎಂಸಿ ನೀರು ಹರಿಯುವ ಲೆಕ್ಕಾಚಾರದಲ್ಲಿ ಪೈಪ್ ಲೈನ್ ನಡೆಯಲಿದೆ. ಈ ಕಾಮಗಾರಿ ನಡೆದಲ್ಲಿ ತಾಲ್ಲೂಕಿನ ರೈತರು ಬೀದಿಗೆ ಬೀಳುತ್ತಾರೆ. ಈ ನಿಟ್ಟಿನಲ್ಲಿ ರೈತರು ಯಾವ ಪಕ್ಷದ ಮುಖಂಡರಾದರೂ ಇಲ್ಲಿಗೆ ಬಂದು ಹೋರಾಟಕ್ಕೆ ಕೈ ಜೋಡಿಸಲು ಕರೆ ನೀಡಬೇಕು. ರೈತರ ಪರ ಪಕ್ಷಾತೀತ ಉಗ್ರ ಹೋರಾಟ ಅನಿವಾರ್ಯ. ಎಲ್ಲರೂ ಒಗ್ಗೂಡಿ ಬಂದು ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಿದೆ ಎಂದು ಕರೆ ನೀಡಿದರು.
