ಸುರಕ್ಷಿತ ಸೂರು ಪ್ರತಿಯೊಬ್ಬ ಮನುಷ್ಯನ ಕನಸು. ಆದರೆ ಇಂದಿಗೂ ಹಲವಾರು ಕುಟುಂಬಗಳು ಸರಿಯಾದ ಸೂರಿಲ್ಲದೆ ಜೀವ ಕೈಯ್ಯಲ್ಲಿ ಹಿಡಿದು ಬದುಕು ಸಾಗಿಸುತ್ತಿದ್ದಾರೆ ಎಂಬುದಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಎಂ. ಎನ್ ಕೋಟೆ ಗ್ರಾಮದ ಗೌರಮ್ಮ ಅವರ ಕುಟುಂಬವೇ ನಿದರ್ಶನವಾಗಿ ನಿಲ್ಲುತ್ತದೆ.
ಹೌದು. ಮಳೆ ಬಂದರೆ ಸೋರುತ್ತದೆ. ಮಳೆಗೆ ಮಣ್ಣಿನ ಗೋಡೆಗಳು ಶಿಥಿಲಗೊಂಡು ಬಿರುಕುಬಿಟ್ಟಿವೆ. ಯಾವಾಗ, ಏನೋ ಎಂಬ ಭಯದಲ್ಲೇ ಗೌರಮ್ಮ ಮತ್ತು ಆಕೆಯ ಎರಡು ಮಕ್ಕಳು ಜೀವನ ಸಾಗಿಸುತ್ತಿದ್ದಾರೆ.
ಒಬ್ಬ ಮಗ ಅಂಗವಿಕಲ, ಇನ್ನೊಬ್ಬ ಮಗನ ಕೂಲಿ ಕೆಲಸ ನೆಚ್ಚಿಕೊಂಡು ಈ ಕುಟುಂಬ ಕಾಲ ಹಾಕುತ್ತಿದೆ. ಏನಾದರೂ ಮಾಡಿ ಒಂದು ಸುರಕ್ಷಿತ ಮನೆ ಕಟ್ಟುವ ಇವರ ಕನಸಿಗೆ ಇಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸ್ಪಂದಿಸುತ್ತಿಲ್ಲ. ಈ ಬಡ ಕುಟುಂಬದ ಮನವಿಯನ್ನು ಆಲಿಸದಷ್ಟು ಮೊಂಡುತನ ಪ್ರದರ್ಶಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಯಾವುದೇ ಪ್ರಭಾವ ಇಲ್ಲದ ಈ ದಲಿತ ಕುಟುಂಬಕ್ಕೆ ಮನೆ ಕಟ್ಟಿಕೊಳ್ಳಲು ಸರ್ಕಾರದ ನೆರವು ನೀಡಬೇಕಿದೆ.

15 ವರ್ಷದ ಹಿಂದೆ ಅನಾರೋಗ್ಯದಿಂದ ಗೌರಮ್ಮ ಅವರ ಗಂಡ ಲಕ್ಷ್ಮೀರಂಗಯ್ಯ ನಿಧನರಾಗಿದ್ದಾರೆ. ಆಗಿನಿಂದ ಈ ಕುಟುಂಬಕ್ಕೆ ಅಸರೆಯೇ ಇಲ್ಲದಂತಾಗಿದೆ. ಇರುವ ಮಣ್ಣಿನ ಮನೆಯು ಬೀಳುವ ಹಂತ ತಲುಪಿದೆ. ಮನೆಕಳೆದುಕೊಂಡರೆ ಈ ಕುಟುಂಬ ಅಕ್ಷರಶಃ ಬೀದಿಗೆ ಬೀಳಲಿದೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಮನೆ ಇನ್ನಷ್ಟು ಹಾಳಾಗಿದೆ. ಸೋರುತ್ತಿರುವ ಮನೆಗೆ ಬಕೆಟ್ ಪಾತ್ರೆಗಳನ್ನಿಟ್ಟು ರಾತ್ರಿಯಿಡೀ ನಿದ್ದೆಗೆಟ್ಟು ನೀರನ್ನು ಹೊರಗೆ ಹಾಕುತ್ತಿದ್ದಾರೆ. ಹಲವಾರು ಬಾರಿ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಗೆ ವಸತಿ ಯೋಜನೆಯಲ್ಲಿ ಮನೆ ಮಂಜೂರಾತಿ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದರೂ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗ ಮತ್ತು ಚುನಾಯಿತ ಜನಪ್ರತಿನಿಧಿಗಳು ಗಮನ ಕೊಡುತ್ತಿಲ್ಲ ಎಂಬುದು ಕುಟುಂಬದವರ ಆರೋಪವಾಗಿದೆ.
ಅಸಹಾಯಕ ಸ್ಥಿತಿಯಲ್ಲಿರುವ ಈ ಕುಟುಂಬಕ್ಕೆ ಎಂ. ಎನ್. ಕೋಟೆ ಗ್ರಾಮ ಪಂಚಾಯಿತಿ ಮನೆ ನಿರ್ಮಿಸಿಕೊಳ್ಳಲು ನೆರವಾಗುತ್ತ ಎಂಬುದನ್ನು ಕಾದು ನೋಡಬೇಕಿದೆ.


Secretary number
9480877253
ಈ ನಂಬರಿಗೆ ಓದುಗರೆಲ್ಲ ಕರೆ ಮಾಡಿ ಗ್ರಾಮ ಪಂಚಾಯಿತಿ 25 percent ಅನುದಾನದಲ್ಲಿ ತಾತ್ಕಾಲಿಕವಾಗಿ ಮನೆಯ ದುರಸ್ತಿಗೆ ಹಣ ನೀಡಬಹುದು.