ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಮುಂದಿನ ದಿನಗಳಲ್ಲೂ ಯುವ ಪೀಳಿಗೆಗೆ ಆಕರ್ಷಣೆಯಾಗುವ ಜಾನಪದವನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಒಟ್ಟಿಗೆ ಸೇರಿ ಮಾಡೋಣ ಎಂದು ಸಂಪನ್ಮೂಲ ವ್ಯಕ್ತಿ ಡಾ.ಮೂರ್ತಿ ತಿಮ್ಮನಹಳ್ಳಿ ಕರೆ ನೀಡಿದರು.
ತಾಲ್ಲೂಕಿನ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಯುವಜನತೆ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾಹಿತ್ಯದಲ್ಲಿ ಚಂಪೂ ಕಾವ್ಯ, ವಚನ ಸಾಹಿತ್ಯ, ಷಟ್ಪದಿ, ತ್ರಿಪದಿ, ರಗಳೆ, ಜನಪದ ಸಾಹಿತ್ಯ ಹೀಗೆ ಹಲವು ಪ್ರಕಾರಗಳಿವೆ ಎಂದು ವಿವರಿಸಿದರು.
ಸಾಹಿತ್ಯಾಸಕ್ತಿ ಮೂಡಿಸುವ ಕವನ, ಕಾದಂಬರಿ, ಗದ್ಯ, ನಾಟಕಗಳು ಸಹ ನಮ್ಮಲ್ಲಿ ಶ್ರೀಮಂತವಾಗಿ ಬೆಳೆದರೂ ಪ್ರಸ್ತುತ ಯುವಜನತೆ ಸಾಹಿತ್ಯದಿಂದ ಹೊರತಾಗಿ ಮೊಬೈಲ್ ಭಾಷೆಯತ್ತ ಮುಳುಗಿದ್ದಾರೆ. ಶಿಕ್ಷಣ ಪಡೆದ ನಂತರದಲ್ಲಿ ಸಾಹಿತ್ಯ ಅಭಿರುಚಿ ಬದಲಾಗಿರುವುದು ವಿಷಾದನೀಯ. ಆದರೆ ಅವಿದ್ಯಾವಂತ ಹಳ್ಳಿಗಾಡಿನ ಜನ ಲಿಖಿತ ರೂಪವಿಲ್ಲದ ಜನಪದ ಹಾಡುಗಳು ಎಂದೆಂದಿಗೂ ಅರ್ಥಪೂರ್ಣ ಎನಿಸಿದೆ. ಮನುಷ್ಯನ ಬದುಕಿಗೆ ಹತ್ತಿರವಾದ ಜನಪದ ಹಾಡುಗಳು ಮರೆಯಾಗದಂತೆ ಕಾಪಾಡುವ ಕೆಲಸ ಇಂದಿನ ಯುವ ಸಾಹಿತಿಗಳು ಮಾಡಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಚ್.ಸಿ.ಯತೀಶ್ ಮಾತನಾಡಿ ಕನ್ನಡ ಸಾಹಿತ್ಯ ಉಳಿಸಿ ಬೆಳೆಸಲು ಕಾಲೇಜು ವಿದ್ಯಾರ್ಥಿಗಳು ಮುಂದಾಗಬೇಕು. ಈ ಹಿನ್ನಲೆ ಸಾಹಿತ್ಯ ಪರಿಷತ್ತು ತಾಲ್ಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜಿಗೆ ತೆರಳಿ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸ ಮಾಡುತ್ತಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿದೆ. ನೂರಾರು ಕವಿಗಳ ಸಾಹಿತ್ಯ ಭಂಡಾರ ನಮ್ಮಗಳ ಮಧ್ಯೆ ಇದೆ. ಯುವ ಜನಾಂಗ ತಂತ್ರಜ್ಞಾನ ಜೊತೆ ಬೆರೆತು ಕನ್ನಡ ಸಾಹಿತ್ಯ ಓದುವ ಬರೆಯುವ ಹವ್ಯಾಸ ಮರೆತಿದ್ದಾರೆ. ಯುವ ಸಾಹಿತಿಗಳು ನಿರಂತರ ಸಾಹಿತ್ಯ ಕೃಷಿ ನಡೆಸಬೇಕು ಎಂದು ಕರೆ ನೀಡಿದರು.
ಪ್ರಾಚಾರ್ಯ ಎಚ್.ಎಂ.ಸದಾಶಿವಯ್ಯ ಮಾತನಾಡಿ ನಮ್ಮ ಕನ್ನಡ ಸಂಸ್ಕೃತಿ ಪರಂಪರೆ ಬಗ್ಗೆ ಯುವಕರು ಅರಿಯಬೇಕಿದೆ. ಶಿಕ್ಷಣ ಜೊತೆಗೆ ಕನ್ನಡ ಸಾಹಿತ್ಯ ಓದುವ ಅಭ್ಯಾಸ ಬೆಳೆಸಿಕೊಂಡರೆ ಬರೆಯುವ ಹವ್ಯಾಸ ಸಹ ಜೊತೆಯಲ್ಲೇ ಮೈಗೂಡುತ್ತದೆ. ಕಾಲೇಜಿನ ಗ್ರಂಥಾಲಯವನ್ನು ಬಳಸಿಕೊಂಡು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಿ ಗುರುತರ ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಕೆಲ ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪನ್ಯಾಸಕರಾದ ಪಾಲಾಕ್ಷ ಹಾಗಲವಾಡಿ, ಮಂಜುನಾಥ್, ಚಿಕ್ಕರಾಜು, ಶಂಭುಲಿಂಗಮೂರ್ತಿ, ವೇಣುಗೋಪಾಲ್, ವಿದ್ಯಾ, ಕುಸುಮಾ, ರಾಜೇಶ್ವರಿ ಸೇರಿದಂತೆ ಹಲವು ಭಾಗವಹಿಸಿದ್ದರು.