ಮಧ್ಯ ಪ್ರದೇಶ ರಾಜ್ಯದ ಗ್ವಾಲಿಯರ್ ನಲ್ಲಿ ನಡೆಯುವ ರಾಷ್ಟ್ರೀಯ ವೀಲ್ ಚೇರ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ಕ್ರೀಡಾಕೂಟಕ್ಕೆ ತೆರಳುವ ಕರ್ನಾಟಕ ರಾಜ್ಯ ತಂಡಕ್ಕೆ ಗುಬ್ಬಿಯ ವಿಕಲ ಚೇತನ ಗಂಗರಾಜು ಆಯ್ಕೆಯಾಗಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ರೈಲು ಪ್ರಯಾಣ ಮಾಡುವ ವೇಳೆ ಬಿದ್ದು ಬೆನ್ನು ಮೂಳೆ ಕಳೆದುಕೊಂಡು ಕುಳಿತಲ್ಲೇ ಕುಳಿತುಕೊಳ್ಳುವ ಸನ್ನಿವೇಶ ಎದುರಾಯಿತು. ಈ ಸಮಯ ಕೆಲ ತಿಂಗಳು ಆಲೋಚನೆಯಲ್ಲಿ ಮುಳುಗಿ ಜೀವನ ಮುಗಿಯಿತು ಎನ್ನುವ ಖಿನ್ನತೆ ಹಂತಕ್ಕೆ ತೆರಳಿದ್ದರು.

ಇದೇ ಬೇಸರದಲ್ಲಿದ್ದಾಗ ವಿಕಲ ಚೇತನರ ಕ್ರೀಡೆ ಕಡೆ ಆಸಕ್ತಿ ಬೆಳೆದು ಕ್ರಿಕೆಟ್, ಹ್ಯಾಡ್ ಬಾಲ್ ಆಟ ಸೇರಿದಂತೆ ವಿಕಲ ಚೇತನರ ಹಲವು ಕ್ರೀಡೆಯಲ್ಲಿ ಪಾಲ್ಗೊಂಡು ವೀಲ್ ಚೇರ್ ಬ್ಯಾಸ್ಕೆಟ್ ಬಾಲ್ ಆಟದ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡು ಇಂದು ಅದೇ ಕ್ರೀಡೆಯಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾಗಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಕ್ರೀಡಾಕೂಟಕ್ಕೆ ತೆರಳಲಿದ್ದಾರೆ. ತಾಲ್ಲೂಕಿಗೆ ಕೀರ್ತಿ ತಂದುಕೊಟ್ಟ ಗಂಗರಾಜು ಅವರ ಸಾಧನೆಗೆ ಮತ್ತಷ್ಟು ಪ್ರೋತ್ಸಾಹ ದೊರೆಯಬೇಕಿದೆ.
