ಸಾಲುಮರದ ತಿಮ್ಮಕ್ಕನವರ ಹುಟ್ಟೂರು ಕಕ್ಕೇನಹಳ್ಳಿ ಹಾಗೂ ಹುಲಿಕಲ್ ಗ್ರಾಮಗಳನ್ನು ಸರ್ಕಾರದ ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು ಎಂದು ಸಾಲುಮರದ ತಿಮ್ಮಕ್ಕ ಅವರ ದತ್ತುಪುತ್ರ ವನಸಿರಿ ಉಮೇಶ್ ಒತ್ತಾಯಿಸಿದರು.
ಗುಬ್ಬಿ ತಾಲೂಕಿನ ಕಸಬ ಹೋಬಳಿ ಕಕ್ಕೆನಹಳ್ಳಿ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಬಡಾವಣೆ ಹಾಗೂ ಛಲವಾದಿ ಮಹಾಸಭಾ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಾಲುಮರದ ತಿಮ್ಮಕ್ಕ ಪದ್ಮಶ್ರೀ ಪ್ರಶಸ್ತಿ ವಿಜೇತರಾಗಿ ಪ್ರಪಂಚದ ಹಲವು ದೇಶಗಳಲ್ಲಿ ಪ್ರಶಸ್ತಿ ಗೌರವ ಪಡೆದವರು. ಅವರು ಹುಟ್ಟಿ ಬೆಳೆದು ಗ್ರಾಮಗಳೇ ಇನ್ನು ಅನಾಥವಾಗಿವೆ ಎಂಬುದು ನೋಡಿದಾಗ ಅವರ ಜಾತಿಯೇ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆಯಾಗಿವೆಯ ಎಂಬ ಅನುಮಾನ ಮೂಡುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಶಾಸಕರು ಈ ಎರಡು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವರ ಹೆಸರಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿ. ಆಗ ಅವರಿಗೆ ಹೆಚ್ಚಿನ ಸಂತೋಷವಾಗುತ್ತದೆ ಮತ್ತು ಅವರಿಗೆ ಭಾರತ ರತ್ನದಂತ ಪ್ರಶಸ್ತಿಯನ್ನು ನೀಡಿದಾಗ ನಿಸ್ವಾರ್ಥ ಸೇವೆಗೆ ಸಲ್ಲಿದಂತಹ ಕಳಕಳಿಯಾಗುತ್ತದೆ ಎಂದು ತಿಳಿಸಿದರು.
ಸಾಲುಮರದ ತಿಮ್ಮಕ್ಕನವರಿಗೆ ಯಾವ ಪ್ರಶಸ್ತಿ ಯಾವ ಮಟ್ಟದ್ದು ಎಂಬುದರ ಬಗ್ಗೆ ಅರಿವು ಇಲ್ಲ. ಅವರು ಹೇಳುವುದು ಒಂದೇ ಮಾತು ಎಲ್ಲರೂ ಸಸಿಗಳನ್ನು ಹಾಕಿ ಪರಿಸರ ಉಳಿಸಿ ಶಾಂತಿ ಸಹ ಬಾಳ್ವೆಯಿಂದ ಜೀವನ ಮಾಡಿರಿ ಎಂಬುದನ್ನು ಬಿಟ್ಟು ಬೇರೇನು ಹೇಳುವುದಿಲ್ಲ. ಅವರು ಖಂಡಿತವಾಗಿ ನಮಗೆ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.

ಛಲವಾದಿ ಮಹಾಸಭಾ ರಾಜ್ಯ ಜಂಟಿ ಕಾರ್ಯದರ್ಶಿ ಟಿ.ಆರ್.ನಾಗೇಶ್ ಮಾತನಾಡಿ, ಪ್ರಪಂಚದ ಮನೆ ಮಾತಾಗಿರುವ ಪರಿಸರ ಪ್ರೇಮಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಕಕ್ಕೇನಹಳ್ಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ ಇಂದು ಪ್ರಪಂಚದಲ್ಲಿ ಹೆಸರು ಮಾಡಿರುವುದು ಸಾಮಾನ್ಯ ಸಂಗತಿಯಲ್ಲಿ. ನಮ್ಮ ಛಲವಾದಿ ಸಮುದಾಯದಲ್ಲಿ ಹುಟ್ಟಿರುವ ಹೆಣ್ಣುಮಗಳಿಗೆ ನಾವೆಲ್ಲರೂ ಅತ್ಯಂತ ಹೆಚ್ಚಿನ ಗೌರವ ಸಲ್ಲಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ವೈದ್ಯ ಡಾ. ನಾಗಭೂಷಣ್ ಮಾತನಾಡಿ ಗುಬ್ಬಿ ತಾಲೂಕಿನವರೇ ಆಗಿರುವ ಸಾಲುಮರದ ತಿಮ್ಮಕ್ಕನವರ ಹೆಸರನ್ನು ಗುಬ್ಬಿ ಬಸ್ ನಿಲ್ದಾಣಕ್ಕೆ ಹೆಸರು ಇಡುವುದರಿಂದ ಖಂಡಿತವಾಗಿ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಶಾಸಕರು ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷರಾಗಿರುವುದರಿಂದ ಈ ಕೆಲಸವನ್ನು ಅವರು ಮಾಡಬಹುದು ಅದ್ದರಿಂದ ಎಲ್ಲಾರು ಶಾಸಕರಿಗೆ ಮನವಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಗೌರವಾಧ್ಯಕ್ಷ ಬಿ.ಲೋಕೇಶ್, ಯುವ ಘಟಕದ ಅಧ್ಯಕ್ಷ ಹೆಚ್. ಕೆ.ಮಧು, ಚಾಲುಕ್ಯ ಆಸ್ಪತ್ರೆಯ ಸಿಇಓ ಡಾ ನಾಗಭೂಷಣ್, ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ , ಉಪಾಧ್ಯಕ್ಷೆ ಮಹಾಲಕ್ಷ್ಮಿಮ್ಮ, ಸದಸ್ಯೆ ಗಂಗಮಣಿ, ಪಿಡಿಒ ಭಾನುಮತಿ, ಛಲವಾದಿ ಮಹಾಸಭಾ ಕಸಬ ಘಟಕದ ಅಧ್ಯಕ್ಷ ಎ.ಟಿ.ಮುನಿರಾಜು, ಎ.ಮಂಜುನಾಥ್, ಗಿರಿಜಮ್ಮ, ನಿಟ್ಟೂರು ಬಿ.ಆರ್.ಗೋಪಾಲ್, ಶಾಖಾ ಘಟಕದ ಅಧ್ಯಕ್ಷ ಆರ್.ನಾಗರಾಜ್, ಹಿರಿಯ ಮುಖಂಡ ಕೆಂಪಯ್ಯ, ಗೌರವಾಧ್ಯಕ್ಷ ಕೆಂಪಣ್ಣ, ತಾಲ್ಲೂಕಿನ ವಿವಿಧ ಛಲವಾದಿ ಮಹಾಸಭಾ ಘಟಕಗಳ ಪದಾಧಿಕಾರಿಗಳು, ಸದಸ್ಯರು,ಸಾಲುಮರದ ತಿಮ್ಮಕ್ಕ ಬಡಾವಣೆಯ ಶಾಖಾ ಘಟಕದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.