ರಾಜ್ಯದ ಕೆಲ ಜಿಲ್ಲೆಯಲ್ಲಿ ತುಮಕೂರು ಜಿಲ್ಲೆ ಕ್ರೀಡಾ ಚಟುವಟಿಕೆಯಲ್ಲಿ ಹೆಸರು ಗಳಿಸಿದೆ. ಆದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ರೀಡಾ ಕೋಟಾದಡಿ ಕೆಲಸ ಪಡೆದು ಬದುಕು ಕಟ್ಟಿಕೊಂಡವರ ಸಂಖ್ಯೆ ಗುಬ್ಬಿ ತಾಲ್ಲೂಕಿನಲ್ಲಿ ಸಿಗುತ್ತದೆ. ಈ ಸಾಧನೆಯ ಹಿಂದೆ ಚನ್ನಬಸವೇಶ್ವರ ಯುವಕ ಸಂಘ ಹಾಗೂ ಶಂಕರ್ ಕುಮಾರ್ ಅವರ ಶ್ರಮ ಇದೆ ಎಂದರೆ ಅತಿಶಯೋಕ್ತಿ ಅಲ್ಲ ಎಂದು ಹಾಲಪ್ಪ ಸೇವಾ ಪ್ರತಿಷ್ಠಾಪನಾ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಚನ್ನಬಸವೇಶ್ವರ ಯುವಕ ಸಂಘ ಆಯೋಜಿಸಿದ್ದ ಉಚಿತ ಬೇಸಿಗೆ ಕ್ರೀಡಾ ಶಿಬಿರ – 2025 ಮುಕ್ತಾಯ ಸಮಾರಂಭ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಈಗಿನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಉತ್ತಮ ಕ್ರೀಡಾಪಟುಗಳು. ಅವರನ್ನು ಗುಬ್ಬಿಯ ಕ್ರೀಡಾಕೂಟಕ್ಕೆ ಕರೆದು ಸಹಕಾರ ಕೋರಿ ಕ್ರೀಡಾ ಚಟುವಟಿಕೆಗೆ ಅಗತ್ಯ ಸವಲತ್ತು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸೂಕ್ತ ದೈಹಿಕ ಆರೋಗ್ಯ ಅವಶ್ಯವಿದೆ. ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಲ್ಲಿ ಓದುವ ಅಭ್ಯಾಸ ಹೆಚ್ಚುತ್ತದೆ. ಮಾನಸಿಕ ಸ್ಥೈರ್ಯ ತುಂಬುತ್ತದೆ. ಈ ಜೊತೆ ಹೊರಗಿನ ಪ್ರಪಂಚವನ್ನು ಅರಿಯುತ್ತಾರೆ. ಈ ನಿಟ್ಟಿನಲ್ಲಿ ಕ್ರೀಡಾಕೂಟಗಳು ಹಾಗೂ ಕ್ರೀಡಾ ತರಬೇತಿ ಶಿಬಿರಗಳು ನಿರಂತರ ನಡೆಯಬೇಕು. ಸರ್ಕಾರದ ಜೊತೆ ಕ್ರೀಡೆಗೆ ಅವಶ್ಯ ಸೌಕರ್ಯ ಒದಗಿಸಲು ಚರ್ಚೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಹಶೀಲ್ದಾರ್ ಆರತಿ.ಬಿ ಮಾತನಾಡಿ ಮಾನಸಿಕ ಒತ್ತಡ ಕಡಿಮೆ ಮಾಡುವ ಶಕ್ತಿ ಕ್ರೀಡೆಗೆ ಇದೆ. ಕ್ರೀಡೆಯಲ್ಲಿ ತೊಡಗಿದ ಮಕ್ಕಳು ಶಿಕ್ಷಣದಲ್ಲೂ ಸಹ ಸೈ ಎನಿಸಿಕೊಳ್ಳುತ್ತಾರೆ. ಸಂಕುಚಿತ ಮನೋಭಾವ ತೊಡೆದು ವಿಶಾಲ ಮನೋಭಾವ ಬೆಳೆಸಲು ಕ್ರೀಡೆ ಉತ್ತಮ ವೇದಿಕೆ. ಪಟ್ಟಣದ ಸುತ್ತಲಿನ 10 ಕಿಮೀ ವ್ಯಾಪ್ತಿಯ ಎಲ್ಲಾ ಗ್ರಾಮೀಣ ಮಕ್ಕಳು ಶಿಬಿರಕ್ಕೆ ಬಂದಿದ್ದು ಉತ್ತಮ ಬೆಳವಣಿಗೆ. ಇದೇ ಮಾದರಿ ಶಿಬಿರ ವರ್ಷ ಪೂರ್ತಿ ನಡೆಸಿ ಉತ್ತಮ ಕ್ರೀಡಾಪಟುಗಳ ನಿರ್ಮಾಣ ಆಗಲಿ ಎಂದು ಆಶಿಸಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಗ್ರಾಮೀಣ ಸೊಗಡಿನ ಕ್ರೀಡೆಗೆ ಹೆಸರು ತಂದುಕೊಟ್ಟ ಗುಬ್ಬಿ ತಾಲ್ಲೂಕು ಕೊಕ್ಕೋ ಹಾಗೂ ವಾಲಿಬಾಲ್ ಆಟಗಾರರು ಇಂದು ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ. ಗ್ರಾಮೀಣ ಮಕ್ಕಳು ಬರುವ ಡಿಗ್ರಿ ಕಾಲೇಜು ಮೈದಾನ ನೀರಿನಿಂದ ಕೂಡಿದೆ. ಇಲ್ಲಿ ಮಕ್ಕಳಿಗೆ ಕ್ರೀಡೆಗೆ ಅವಕಾಶ ಮಾಡುವ ಕೆಲಸ ಹಾಲಪ್ಪ ಅವರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಬೇಸಿಗೆ ಶಿಬಿರ 110 ಮಕ್ಕಳಿಂದ ನಡೆದಿದೆ. ಕೊಕ್ಕೋ ಹಾಗೂ ವಾಲಿಬಾಲ್ ಕ್ರೀಡೆ ಅತ್ಯುತ್ತಮ ತರಬೇತಿ ಮೂಲಕ ಕ್ರೀಡಾಪಟುಗಳ ನಿರ್ಮಾಣ ಆಗಿದೆ. ಈ ಮಕ್ಕಳಿಗೆ ನಿರಂತರ ತರಬೇತಿ ಸಿಕ್ಕಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಮಾರ್ಪಾಡು ಆಗುತ್ತಾರೆ. ಈ ನಿಟ್ಟಿನಲ್ಲಿ ದಾನಿಗಳ ಮೂಲಕ ಮಕ್ಕಳಿಗೆ ಬೆಳಿಗ್ಗೆ ಉಪಹಾರ, ಸಮವಸ್ತ್ರ ನೀಡಲಾಗಿದೆ. ಶಿಬಿರದ ಪ್ರಶಸ್ತಿಪತ್ರ ಸಹ ನೀಡಲಾಗಿದೆ. 70 ರಷ್ಟು ಗ್ರಾಮೀಣ ಭಾಗದ ಮಕ್ಕಳು ಈ ಬಾರಿ ಶಿಬಿರದಲ್ಲಿ ಇದ್ದದ್ದು ವಿಶೇಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಕೊಕ್ಕೋ ಹಾಗೂ ವಾಲಿಬಾಲ್ ಕ್ರೀಡಾಪಟುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ರಾಜ್ಯ ಕೊಕ್ಕೋ ಸಂಸ್ಥೆಯ ಉಪಾಧ್ಯಕ್ಷ ಜಿ.ವೈ.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಚ್.ರಾಜು, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಬಿ.ಬಸವರಾಜು, ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಜಿ.ಆರ್.ವಿಶ್ವನಾಥ್, ಗುಬ್ಬಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ, ಹಿರಿಯ ಆಟಗಾರರಾದ ಭಾಗ್ಯಲಕ್ಷ್ಮೀ, ಜಿ.ಸಿ.ಚಂದ್ರಕಲಾ, ವಸೀಂ, ಕುಮಾರಸ್ವಾಮಿ, ಸುರೇಶ್, ಮಲ್ಲಿಕಾರ್ಜುನ್, ವಿನೋದ್, ಗಿರೀಶ್ ಇತರರು ಇದ್ದರು.