ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತ, ಹೊಸಹಳ್ಳಿ ಕ್ರಾಸ್ ನಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಶಾಲೆಯ ಬಿಸಿಯೂಟ ಸಿಬ್ಬಂದಿಗಳ ಗೌರವಧನ ಕನಿಷ್ಠ 12 ಸಾವಿರ ನೀಡಬೇಕು, ತಾಲ್ಲೂಕಿನ ಬಿಕ್ಕೆಗುಡ್ಡ ಹೇಮಾವತಿ ನೀರು ಯೋಜನೆ ಪೂರ್ಣಗೊಳಿಸುವುದು ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಡಿಜಿಟಲ್ ಸ್ಕ್ಯಾನಿಂಗ್, ಎಕ್ಸರೇ ಅಳವಡಿಕೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಸರ್ಕಾರಕ್ಕೆ ಬೇಡಿಕೆ ಪತ್ರವನ್ನು ತಲುಪಿಸುವಂತೆ ತಾಲ್ಲೂಕು ಆಡಳಿತಕ್ಕೆ ಆಗ್ರಹಿಸಿದರು.
ಬಿಸಿಯೂಟ ತಯಾರಿಸುವ ಸಿಬ್ಬಂದಿಗಳು ಕೇವಲ ಮೂರರಿಂದ ನಾಲ್ಕು ಸಾವಿರಕ್ಕೆ ಕೆಲಸ ಮಾಡುತ್ತಾರೆ. ಈ ಗೌರವಧನಕ್ಕೆ ಕೆಲಸ ಮಾಡದೆ ಸಿಬ್ಬಂದಿಗಳು ಅನ್ಯ ಉದ್ಯೋಗ ಹುಡುಕಿ ಹೊರಟಿದ್ದಾರೆ. ಬಿಸಿಯೂಟ ಮಕ್ಕಳಿಗೆ ಇಲ್ಲವಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಬಿಸಿಯೂಟ ಯೋಜನೆ ನಿಂತು ಹೋಗುವ ಮುನ್ನ ಅಡುಗೆ ತಯಾರಕರಿಗೆ ಕನಿಷ್ಠ ವೇತನದಡಿ 12 ಸಾವಿರ ವೇತನ ನೀಡಬೇಕು ಎಂದು ರೈತ ಸಂಘದ ತಾಲ್ಲೂಕು ಪ್ರದಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಒತ್ತಾಯಿಸಿದರು.
ಗುಬ್ಬಿ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ತೋಟಸಾಗರ ಗೇಟ್ ಬಳಿ ನಿರ್ಮಾಣ ಮಾಡಿದ ವಿದ್ಯುತ್ ಸರಬರಾಜು ಉಪ ಕೇಂದ್ರ ಉದ್ಘಾಟನೆ ಮಾಡಿ ರೈತರಿಗೆ ವಿದ್ಯುತ್ ನೀಡಲು ಸಜ್ಜಾದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಮುಂದಿನ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ತಲೆದೋರುವ ಮುನ್ನ ಉಪಕೇಂದ್ರ ಆರಂಭಿಸಿ ಎಂದು ಒತ್ತಾಯಿಸಿದ ರೈತರು ಹೇಮಾವತಿ ಜಿಲ್ಲೆಯ ಜೀವನಾಡಿ ಅದನ್ನು ರಾಮನಗರದತ್ತ ತೆಗೆದುಕೊಂಡು ಹೋಗುವುದು ಸರಿಯಲ್ಲ. ಇಲ್ಲಿನ ರೈತರಿಗೆ ವಿಷ ನೀಡಿದಂತೆ ಆಗುವ ಕಾರಣ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿ ನಿಲ್ಲಿಸಿ ಮುಖ್ಯನಾಲೆಯ ಮೂಲಕ ನೀರು ಪಡೆಯಲು ಸರ್ಕಾರವನ್ನು ಒತ್ತಾಯಿಸಿದರು.
ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ರೈತ ಸಂಘದ ಪದಾಧಿಕಾರಿಗಳು ಬೇಡಿಕೆ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಕುಮಾರಸ್ವಾಮಿ, ಸತ್ತಿಗಪ್ಪ ಇತರರು ಇದ್ದರು.