ಗೌರಿ ಗಣೇಶ ಹಬ್ಬದ ಸಮಯ ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳು ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ ಮಾಡಿಸಿದ್ದಲ್ಲಿ ಪೆಂಡಾಲ್ ಕಾವಲಿಗೆ ಪೊಲೀಸ್ ಇದ್ದಂತೆ ಕ್ಯಾಮರಾ ಕೆಲಸ ಮಾಡುತ್ತದೆ ಎಂದು ಸಿಪಿಐ ರಾಘವೇಂದ್ರ ತಿಳಿಸಿದರು.
ಗುಬ್ಬಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ದಿನದ 24 ಗಂಟೆ ಕರ್ತವ್ಯ ನಿರತ ಪೊಲೀಸ್ ಇರುವ ರೀತಿ ಕ್ಯಾಮರಾ ಕೆಲಸ ಮಾಡುತ್ತದೆ. ಒಳ್ಳೆಯದು ಕೆಟ್ಟದ್ದು ಎರಡನ್ನೂ ಸೆರೆ ಹಿಡಿಯುವ ಕ್ಯಾಮರಾ ಇದ್ದರೆ ಅವಘಡಗಳು, ಗಲಭೆ, ಕಳ್ಳತನ ಸೇರಿದಂತೆ ಎಲ್ಲಾ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಹೇಳಿದರು.
ಗಣೇಶ ವಿಸರ್ಜನೆ ಉತ್ಸವಕ್ಕೆ ಸಾಕಷ್ಟು ನಿಯಮ ಪಾಲನೆಗೆ ಮಾಡಬೇಕಿದೆ. ಇತ್ತೀಚಿಗೆ ವಿಸರ್ಜನಾ ಸಮಯ ಜೀವಕ್ಕೆ ಅಪಾಯ ಬಂದ ಘಟನೆ ಕಣ್ಮುಂದೆ ಇರುವ ಕಾರಣ. ಮಧ್ಯಾಹ್ನ ವೇಳೆ ವಿಸರ್ಜನಾ ಉತ್ಸವ ಆರಂಭಿಸಿ ಸಂಜೆಯೊಳಗೆ ಸಂಪೂರ್ಣ ಗೊಳಿಸಬೇಕು. ಪ್ರತಿಷ್ಠಾಪನೆಗೆ ಸಂಘಗಳಿಗೆ ಹಲವು ನಿಬಂಧನೆ ತಿಳಿಸಲಾಗಿದೆ. ಸಂಘದ ಮುಖ್ಯಸ್ಥರ ಮಾಹಿತಿ, ಪೆಂಡಾಲ್ ಇರುವ ಸ್ಥಳ ಸುರಕ್ಷತೆ, ಸ್ಥಳೀಯ ಪಟ್ಟಣ ಪಂಚಾಯಿತಿ, ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆ ಅನುಮತಿ ಕಡ್ಡಾಯ ಪಡೆಯಬೇಕು. ಅನುಮತಿ ಪಡೆಯಲು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಏಕ ಗವಾಕ್ಷಿ ಪದ್ಧತಿ ಮೂಲಕ ಮೂರು ಇಲಾಖೆಯ ಸಿಬ್ಬಂದಿಗಳು ಪರಿಶೀಲಿಸಿ ಅನುಮತಿ ಪತ್ರ ನೀಡಲಿದ್ದಾರೆ ಎಂದ ಅವರು ಪರಿಸರ ಸಂರಕ್ಷಣೆ ಹಿನ್ನಲೆ ಬಣ್ಣ ರಹಿತ ಮಣ್ಣಿನ ವಿಗ್ರಹ ಪ್ರತಿಷ್ಠಾಪನೆ ಮಾಡುವಂತೆ ಮನವಿ ಮಾಡಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಪಟ್ಟಣ ಪಂಚಾಯಿತಿ ಈಗಾಗಲೇ ಸಭೆ ನಡೆಸಿ ಗಣೇಶ ವಿಸರ್ಜನೆಗೆ ತೊರೆಮಠದ ತೊರೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಲೈಟ್ ವ್ಯವಸ್ಥೆ ಜೊತೆ ಎಲ್ಲಾ ಸುರಕ್ಷತಾ ಜಾಗೃತಿ ಕ್ರಮ ವಹಿಸಲಾಗಿದೆ ಎಂದು ಅವರು ಕೆಲ ದಿನಗಳಿಂದ ಅಪರಾಧ ಕೃತ್ಯಗಳು ಪಟ್ಟಣದಲ್ಲಿ ಹೆಚ್ಚಾಗಿದೆ. ಲಕ್ಷಾಂತರ ಬೆಲೆಯ ಚಿನ್ನಾಭರಣ ಹಾಡಹಗಲೇ ಕಳ್ಳತನ ನಡೆದಿದೆ. ತಡರಾತ್ರಿ ವೇಳೆ ಬೈಕ್ ನಲ್ಲಿ ಮುಸುಕುಧಾರಿ ಕಳ್ಳರ ಓಡಾಟ, ಬೈಕ್ ಕಳ್ಳತನ ಹೀಗೆ ಅನೇಕ ಘಟನೆ ಭಯ ಉಂಟು ಮಾಡಿದೆ. ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತು ಕಳ್ಳತನ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಪಪಂ ಸದಸ್ಯ ಮಹಮದ್ ಸಾದಿಕ್ ಮಾತನಾಡಿ ಸ್ಥಳೀಯ ಪಟ್ಟಣ ಪಂಚಾಯಿತಿ ಚಿಕ್ಕ ಗಣೇಶ ವಿಸರ್ಜನೆಗೆ ಟ್ರ್ಯಾಕ್ಟರ್ ಮೂಲಕ ಟ್ಯಾಂಕ್ ವ್ಯವಸ್ಥೆ ಮಾಡಲಿದೆ. ದೊಡ್ಡ ಗಣೇಶ ವಿಸರ್ಜನೆಗೆ ತೊರೆಯಲ್ಲಿ ಅವಕಾಶ ಮಾಡಲಾಗಿದೆ. ಈ ಜೊತೆಗೆ ಈದ್ ಮಿಲಾದ್ ಹಬ್ಬ ಹಿನ್ನಲೆ ಹಿಂದೂ ಮುಸ್ಲಿಂ ಭಾವೈಕ್ಯತೆಯಲ್ಲಿ ಹಬ್ಬ ಆಚರಣೆ ಮಾಡಲಿದ್ದೇವೆ. ಹಿಂದೆಂದೂ ಯಾವ ಅಚಾತುರ್ಯ ನಡೆದಿಲ್ಲ ಎಂದರು.
ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ ಪಟ್ಟಣದಲ್ಲಿ ಸುಮಾರು 25 ಕಡೆ ಗಣೇಶ ಪ್ರತಿಷ್ಠಾಪನೆ ಮಾಡಲಿದ್ದಾರೆ. ಎಲ್ಲರೂ ಒಟ್ಟಾಗಿ ಮಾತನಾಡಿಕೊಂಡು ಸಾಮೂಹಿಕ ಗಣೇಶ ವಿಸರ್ಜನೆಗೆ ಮುಂದಾಗಬೇಕು. ಒಂದೇ ದಿನ ಎಲ್ಲರೂ ಒಟ್ಟಾಗಿ ಸೇರಿದರೆ ಉತ್ಸವ ಅದ್ದೂರಿಯಾಗಿ ಸಾವಿರಾರು ಮಂದಿ ಭಾಗಿಯಾಗುತ್ತಾರೆ. ಈ ಹಿಂದೆ ಒಮ್ಮೆ 17 ಗಣೇಶ ವಿಸರ್ಜನೆ ಮಾಡಲಾಗಿತ್ತು ಎಂದು ಸ್ಮರಿಸಿದರು.
ಗುಬ್ಬಿ ಪಿಎಸ್ಐ ಸುನೀಲ್ ಕುಮಾರ್ ಮಾತನಾಡಿ ಗಣೇಶ ವಿಸರ್ಜನೆಗೆ ಡಿಜೆ ಸಂಸ್ಕೃತಿಗೆ ಅನುಮತಿ ನೀಡುವುದಿಲ್ಲ. ಸಾಂಪ್ರದಾಯಕ ರೀತಿ ಗಣೇಶ ಉತ್ಸವ ನಡೆಸಿ ಸಂಜೆಯೊಳಗೆ ವಿಸರ್ಜನೆ ಮುಗಿಸಬೇಕು. ಅನುಮತಿ ಕಡ್ಡಾಯ ಪಡೆಯಬೇಕು. ಹಬ್ಬಕ್ಕೆ ಅನುಸರಿಸುವ ನಿಬಂಧನೆಯನ್ನು ಮುಂಜಾಗ್ರತಾ ಕ್ರಮ ಎಂದು ಭಾವಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡೋಣ. ಗಣೇಶ ಹಾಗೂ ಈದ್ ಮಿಲಾದ್ ಒಟ್ಟಾಗಿ ಆಚರಿಸಿ ಹಿಂದೂ ಮುಸ್ಲಿಂ ಐಕ್ಯತೆ ತೋರಬೇಕಿದೆ ಎಂದ ಅವರು ಹಗಲಲ್ಲಿ ನಡೆದ ಕಳ್ಳತನ ಪ್ರಕರಣ ಶೀಘ್ರದಲ್ಲಿ ಪತ್ತೆಯಾಗಲಿದೆ ಎಂದರು.