ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನ ಮಾತುಗಳಾಡಿದ ಐಪಿಎಸ್ ಅಧಿಕಾರಿ ಎಡಿಜಿಪಿ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಅವರ ಮಾಡಿದ ಭ್ರಷ್ಟಚಾರ ತನಿಖೆಗೆ ಒಳಪಡಿಸಬೇಕು ಎಂದು ಗುಬ್ಬಿ ತಾಲ್ಲೂಕು ಜೆಡಿಎಸ್ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಆಗ್ರಹಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಐಪಿಎಸ್ ಅಧಿಕಾರಿ ಚಂಡೇಶೇಖರ್ ವಿರುದ್ಧ ಘೋಷಣೆ ಕೂಗಿದರು. ರಾಜ್ಯದ ಮನೆ ಮಾತಾದ ರೈತ ನಾಯಕ ಕುಮಾರಣ್ಣ ಅವರನ್ನು ನಿಂದಿಸಿದ ಅಧಿಕಾರಿ ಅಮಾನತುಗೊಳಿಸಬೇಕಾದ ಕಾಂಗ್ರೆಸ್ ಸರ್ಕಾರ ಅಧಿಕಾರಿಯ ಬೆಂಬಲಕ್ಕೆ ನಿಂತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಮಾಜಿ ಸಿಎಂ ಹಾಲಿ ಕೇಂದ್ರ ಸಚಿವ ಕುಮಾರಣ್ಣ ಅವರ ಬಗ್ಗೆ ಹಗುರ ಮಾತಾಡಿದ ಚಂದ್ರಶೇಖರ್ ವಿರೋಧ ಪಕ್ಷದ ನಾಯಕರ ರೀತಿ ಹೇಳಿಕೆ ನೀಡಿ ಅವಹೇಳನ ಪದ ಬಳಕೆ ಖಂಡನೀಯ. ಆಡಳಿತ ನಡೆಸುವ ಅಧಿಕಾರಿ ವರ್ಗ ರಾಜಕೀಯ ವ್ಯಕ್ತಿ ರೀತಿ ಮಾತನಾಡಲು ಧೈರ್ಯ ಕೊಟ್ಟವರು ಯಾರು ಎಂಬುದು ಎಲ್ಲರಿಗೂ ತಿಳಿಯುತ್ತಿದೆ. ದುರ್ವರ್ತನೆಯ ಅಧಿಕಾರಿಯನ್ನು ರಕ್ಷಿಸುವ ಕೆಲಸ ಮಾಡುವ ಸರ್ಕಾರ ಅಭಿವೃದ್ದಿ ವಿಚಾರದಲ್ಲಿ ಶೂನ್ಯ ಸಂಪಾದಿಸಿದೆ ಎಂದ ಅವರು ಗುಬ್ಬಿ ಶಾಸಕರು ಚುನಾವಣೆಗೆ ಮುನ್ನ ಪೂಜೆ ಮಾಡಿದ ರಸ್ತೆಗಳು ಈವರೆವಿಗೂ ಕೆಲಸ ನಡೆದಿಲ್ಲ. ಅವರದ್ದೇ ಸರ್ಕಾರ ಇದೆ. ಮೊದಲು ರಸ್ತೆ ಅಭಿವೃದ್ದಿ ಕೆಲಸ ಮಾಡಲಿ ಎಂದು ಛೇಡಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ರೈತಾಪಿ ನಾಯಕ ಕುಮಾರಣ್ಣ ಅವರ ಬಗ್ಗೆ ನಿಂದಿಸುವ ಮಟ್ಟಕ್ಕೆ ಬೆಳೆದ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಬೆಂಗಳೂರಿನಲ್ಲಿ ಬಹಳ ವರ್ಷದಿಂದ ಬೇರೂರಿ ಭ್ರಷ್ಟಚಾರ ನಡೆಸುತ್ತಿರುವ ಬಗ್ಗೆ ಬಟ ಬಯಲಾಗಿದೆ. ಇಂತಹ ಅಧಿಕಾರಿ ಬೆನ್ನಿಗೆ ನಿಲ್ಲದೆ ಸರ್ಕಾರ ಕೂಡಲೇ ಅಮಾನತು ಮಾಡಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರ ಮೊದಲಿಸುವ ಕೆಲಸ ಮಾಡುತ್ತಿದೆ. ಕುಮಾರಣ್ಣ ಅವರ ನಿಂದನೆ ಮಾಡುವ ಅಧಿಕಾರಿ ಹಿಂದೆ ಯಾರೇ ಇದ್ದರೂ ಸರಿ ಅವರ ಸೇವೆ ಅವಶ್ಯ ಇಲ್ಲಿಲ್ಲ. ಕೂಡಲೇ ಅಮಾನತುಗೊಳಿಸಿ ಅವರ ಮೂಲ ರಾಜ್ಯಕ್ಕೆ ವರ್ಗಾವಣೆ ಮಾಡಿ ಎಂದು ಆಗ್ರಹಿಸಿದರು.
ಮುಖಂಡ ಹೊನ್ನಗಿರಿಗೌಡ ಮಾತನಾಡಿ ಅವಹೇಳನ ಪದ ಬಳಕೆ ಮಾಡಿದ ಅಧಿಕಾರಿ ಒಂದು ಪಕ್ಷ ಓಲೈಸಿ ಮಾತನಾಡುತ್ತಿರುವುದು ಸರಿಯಲ್ಲ. ಕೇಂದ್ರ ಸಚಿವರಿಗೆ ನಿಂದಿಸುವ ಈ ವ್ಯಕ್ತಿ ಸಾಮಾನ್ಯ ಜನರನ್ನು ಯಾವ ರೀತಿ ಕಾಣುತ್ತಾರೆ ಎಂಬುದು ಯೋಚಿಸಬೇಕು. ಇಂತಹ ಅಧಿಕಾರಿ ರಾಜ್ಯಕ್ಕೆ ಬೇಕಿಲ್ಲ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ನಂತರ ಎಲ್ಲಾ ಜೆಡಿಎಸ್ ಮುಖಂಡರು ಜೆಡಿಎಸ್ ಅಧ್ಯಕ್ಷ ಚಿಕ್ಕವೀರಯ್ಯ ಅವರ ನೇತೃತ್ವದಲ್ಲಿ ತಾಲ್ಲೂಕು ಶಿರಸ್ತೇದಾರ್ ವರುಣ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಯೋಗಾನಂದಕುಮಾರ್, ಜಿ.ಡಿ.ಸುರೇಶ್ ಗೌಡ, ಸಿದ್ಧಗಂಗಮ್ಮ, ಡಿ.ರಘು, ಗಂಗಾಧರ್, ಜಗದೀಶ್, ವೆಂಕಟೇಶ್, ಶಿವಾನಂದ್, ಗಿರೀಶ್ ಇತರರು ಇದ್ದರು.
