ಮನೆ ಮನೆಯಲ್ಲಿ ಕನ್ನಡ ಮಾತೃ ಭಾಷೆಯಾಗಿದೆ. ಈ ಜೊತೆಗೆ ಉದ್ಯೋಗ ಸೃಷ್ಟಿಸಿ ಅನ್ನದ ಭಾಷೆ ಎಂಡೆನಿಸಬೇಕು ಎಂದು ನಲ್ಲೂರು ಗ್ರಾಪಂ ಅಧ್ಯಕ್ಷ ವತ್ಸಲಕುಮಾರ್ ತಿಳಿಸಿದರು
ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಮಾರನಹಳ್ಳಿ ಗ್ರಾಮದಲ್ಲಿ ಶ್ರೀ ಮುನೇಶ್ವರ ಸೇವಾ ಸಮಿತಿವತಿಯಿಂದ ಕಾರ್ತಿಕ ದೀಪೋತ್ಸವ ಅಂಗವಾಗಿ ಅದ್ದೂರಿಯಾಗಿ ಆಚರಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಶಾಸ್ತ್ರೀಯ ಸ್ಥಾನಮಾನ ಗಳಿಸಿದೆ ಎಂದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ಸುಂದರ ಸರಳ ಭಾಷೆಯಾಗಿ ಬೆಳೆದ ಕನ್ನಡ ಆಂಗ್ಲ ಮಾಧ್ಯಮ ಒಲವಿನಲ್ಲಿ ಇಕ್ಕಟ್ಟಿಗೆ ಸಿಲುಕಿದೆ. ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಗಳು ಮಾತ್ರ ಕನ್ನಡ ಉಳಿಸುವ ಕೆಲಸ ಮಾಡುತ್ತಿದೆ. ಕಾನ್ವೆಂಟ್ ವ್ಯಾಮೋಹದಿಂದ ಪೋಷಕರು ಕನ್ನಡ ತಾತ್ಸಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಲಾವಿದ ನರಸಿಂಹಮೂರ್ತಿ ಮಾತನಾಡಿ ಕನ್ನಡ ಉಳಿಸಿ ಬೆಳೆಸುವ ಕೆಲಸ ರಂಗಭೂಮಿ ಮಾಡುತ್ತಿದೆ. ಆದರೆ ಮಾತೃಭಾಷೆ ಮೇಲಿನ ಪ್ರೀತಿ ಗೌರವ ನಗರ ಪ್ರದೇಶದಲ್ಲಿ ಕ್ಷೀಣಿಸಿದೆ. ಅನ್ಯ ಭಾಷೆಯ ಜೊತೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ಮಾತೃಭಾಷೆ ಅನ್ಯ ವಲಸಿಗರಿಗೆ ಕಲಿಸುವ ಮೂಲಕ ಕ್ರಾಂತಿ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವೀರೇಶಸ್ವಾಮಿ, ಲಕ್ಕೇನಹಳ್ಳಿ ನರಸಿಯಪ್ಪ, ಪುಟ್ಟರಾಜು, ಮಲ್ಲೇಶಯ್ಯ, ದೊಡ್ಡಮ್ಮ, ಗೌರಮ್ಮ, ಬಸವರಾಜು, ಅರ್ಚಕರಾದ ಶಿವಮ್ಮ ಸೇರಿದಂತೆ ಮುನೇಶ್ವರ ಸೇವಾ ಸಮಿತಿ ಸದಸ್ಯರು ಭಾಗವಹಿಸಿದ್ದರು.
