ಬಗರ್ ಹುಕುಂ ಸಾಗುವಳಿ ಭೂಮಿಯ ಪಹಣಿಯಲ್ಲಿ ಅರಣ್ಯ ಇಂಡೀಕರಣ ರದ್ದುಪಡಿಸಿ ಸರ್ಕಾರಿ ಕಂದಾಯ ಭೂಮಿಯಾಗಿ ಮರು ಸ್ಥಾಪಿಸಲು ಹಾಗೂ ಸಕ್ರಮ ಕೋರಿ ಸಲ್ಲಿಸಿದ್ದ ಬಡ ರೈತರ ಅರ್ಜಿಯನ್ನ ಮಾನ್ಯ ಮಾಡಿ ಕೂಡಲೇ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ನೂರಾರು ರೈತರು ಗುಬ್ಬಿ ತಾಲೂಕು ಕಚೇರಿ ಮುಂದೆ ಜಮಾಯಿಸಿ ದಿಡೀರ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಮೆರವಣಿಗೆಯಲ್ಲಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ ನೂರಾರು ರೈತರು ಸಾಗುವಳಿ ಭೂಮಿ ಸಕ್ರಮ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪತ್ರ ಚಳವಳಿಗೆ ಚಾಲನೆ ನೀಡಿದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಯ್ಯ ಮಾತನಾಡಿ, “ರಾಜ್ಯದಲ್ಲಿ 14 ಲಕ್ಷಕ್ಕೂ ಅಧಿಕ ಮಂದಿ ಬಡ ರೈತರ ಬಗರ್ ಹುಕುಂ ಅರ್ಜಿ ಹಾಗೆಯೇ ಸರ್ಕಾರದ ಮುಂದಿದೆ. ಒಂದೂವರೆ ವರ್ಷ ಕಳೆದರೂ ಅಕ್ರಮ ಸಕ್ರಮ ಮಾಡುವ ಮಾತಿಲ್ಲ. ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿಲ್ಲ. ಈ ಹಿಂದೆ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದೆ ಉಳ್ಳವರಿಗೆ ಭೂಮಿ ಹಂಚಲಾಗಿದೆ. ಈ ಮಧ್ಯೆ ಮಹಾರಾಜರ ನೋಟಿಫಿಕೇಷೆನ್ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ ಉಳುವವನೇ ಭೂಮಿಯ ಒಡೆಯ ಕಾನೂನು ಎಲ್ಲಿ ಹೋಯ್ತು. ಅರಣ್ಯದಲ್ಲಿ ಕೃಷಿ ಮಾಡಲು ಬಳಸಿರುವ ಭೂಮಿ ಅನುಭವದಲ್ಲಿರುವ ರೈತರಿಗೆ ವಿತರಣೆ ಮಾಡಿ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಮೂಲಕ ಸಂದೇಶ ಕೊಡೋಣ” ಎಂದರು.

ಜಿಲ್ಲಾ ಕಾರ್ಯದರ್ಶಿ ಅಜ್ಜಪ್ಪ ಮಾತನಾಡಿ, “ಸಮಿತಿಗೆ ಅತೀ ಹೆಚ್ಚು ಅರ್ಜಿ ತುಮಕೂರು ಜಿಲ್ಲೆಯಲ್ಲಿ ಪೆಂಡಿಂಗ್ ಇದೆ. ನಮ್ಮ ತಾಲೂಕಿನಲ್ಲಿ 60 ಸಾವಿರ ಅರ್ಜಿಗೆ ಉತ್ತರ ಸಿಕ್ಕಿಲ್ಲ. ಅರ್ಹರಿಗೆ ಭೂಮಿ ನೀಡದೆ ಅನುಭವದಾರ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆದಿದೆ. ಚುನಾಯಿತ ಪ್ರತಿನಿಧಿಗಳು ಬಡವರ ಪರ ದನಿ ಎತ್ತಿಲ್ಲ. ಅಮೃತ ಕಾವಲು ಎಂದು ಪ್ರಾಣಿಗಳ ಹೆಸರಿನಲ್ಲಿ ಭೂಮಿ ಉಳಿಸುವ ವೇಗದಲ್ಲಿ ಸತ್ತವನ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ನೀಡುತ್ತಿಲ್ಲ” ಎಂದು ಕಿಡಿಕಾರಿ, “ಕೂಡಲೇ ವಾಸ್ತವದಲ್ಲಿ ಹತ್ತಾರು ವರ್ಷದಿಂದ ಕೃಷಿ ನಡೆಸಿರುವ ಬಡ ರೈತರನ್ನು ಅರ್ಹತೆ ಆಧಾರದ ಮೇಲೆ ಹಕ್ಕುಪತ್ರ ನೀಡಬೇಕು” ಎಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಸದಸ್ಯರು ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಗುಬ್ಬಿ ತಾಲೂಕು ಅಧ್ಯಕ್ಷ ದೊಡ್ಡನಂಜಯ್ಯ, ತಾಲೂಕು ಕಾರ್ಯದರ್ಶಿ ಬಸವರಾಜು, ಬಗರ್ ಹುಕುಂ ಹೋರಾಟ ಸಮಿತಿಯ ಅಧ್ಯಕ್ಷ ನಾಗರಾಜು, ಮುಖಂಡರಾದ ರಾಜಮ್ಮ, ಎಸ್.ಕೆ.ಕೃಷ್ಣಮೂರ್ತಿ, ರೇಣುಕಮ್ಮ, ಬಸವರಾಜು, ನರಸಿಂಹಮೂರ್ತಿ ಇತರರಿದ್ದರು.
