ಕಳೆದ ಹತ್ತು ವರ್ಷದಿಂದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಎರಡು ಕೋಟಿ ಮೀಸಲಿದ್ದರೂ ಸೂಕ್ತ ಸ್ಥಳ ಒದಗಿಸುವಲ್ಲಿ ತಾಲ್ಲೂಕು ಆಡಳಿತ ಅಸಡ್ಡೆ ತೋರಿದೆ. ಈ ಬಗ್ಗೆ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ ವೇಳೆ ಉಡಾಫೆ ಉತ್ತರ ನೀಡಿದ ಹಿನ್ನಲೆ ಸಭೆ ಬಹಿಷ್ಕರಿಸಿ ಹೊರ ಬಂದ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಜಯಂತಿ ಆಚರಣೆ ಮುನ್ನವೇ ಸೂಕ್ತ ಸ್ಥಳ ನೀಡಬೇಕು. ಇಲ್ಲವಾದಲ್ಲಿ ವಾಲ್ಮೀಕಿ ಜಯಂತಿ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಪೂರ್ವಬಾವಿ ಸಭೆಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸ್ಥಳ ನೀಡದ ಬಗ್ಗೆ ಚರ್ಚೆ ನಡೆದಾಗ ಸೂಕ್ತ ಉತ್ತರ ಸಿಗದ ಹಿನ್ನಲೆ ಸಭೆ ಬಹಿಷ್ಕರಿಸಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳು ಎರಡು ಕೋಟಿ ಮೀಸಲು ಹಣದಲ್ಲಿ ಭವನ ನಿರ್ಮಾಣಕ್ಕೆ ಸ್ಥಳ ಕೊರತೆ ಬಗ್ಗೆ ಈಗಾಗಲೇ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೂ ತಿಳಿಸಿದ್ದೇವೆ. ಪ್ರತಿ ವಾಲ್ಮೀಕಿ ಜಯಂತಿ ಸಮಯ ಪ್ರಸ್ತಾಪ ಮಾಡಿ ನಂತರ ಸ್ಥಳ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಈ ಜೊತೆಗೆ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ಆಹ್ವಾನ ಸಹ ಕೆಲವರಿಗೆ ವಾಟ್ಸಪ್ ಮೂಲಕ ತಿಳಿಸಿ ಸುಮ್ಮನಾಗಿದ್ದಾರೆ. ಈ ವಿಚಾರ ಪ್ರಸ್ತಾಪಕ್ಕೆ ಸ್ಪಂದನೆಯ ಉತ್ತರ ನೀಡದ ತಹಶೀಲ್ದಾರ್ ಆರತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ವೀಣಾ ಅವರು ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ ಎಂದು ಮುಖಂಡರು ಒಕ್ಕೊರಲಿನ ಬೇಸರ ವ್ಯಕ್ತಪಡಿಸಿದರು.
ಪಪಂ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಆಹ್ವಾನ ನೀಡದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಬೇಡ ಜನಾಂಗದ ವಾಲ್ಮೀಕಿ ಅವರ ಬಗ್ಗೆ ಬೇದಭಾವ ತೋರುತ್ತಿದ್ದಾರೆ. ಇದೇ ತಿಂಗಳ 17 ರಂದು ವಾಲ್ಮೀಕಿ ಜಯಂತಿ ರಾಜ್ಯದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಆದರೆ ಗುಬ್ಬಿ ತಾಲ್ಲೂಕಿನಲ್ಲಿ ಕಾರ್ಯಕ್ರಮ ನಡೆಯದ ದುಸ್ಥಿತಿ ಎದುರಾಗಿದೆ. ವಾಲ್ಮೀಕಿ ಭವನ ನಿರ್ಮಾಣಕ್ಕೆ ಸ್ಥಳ ಕೋರಿ ಸುಮಾರು ಹತ್ತು ವರ್ಷವಾಗಿದೆ. ಎಲ್ಲಾ ತಾಲ್ಲೂಕಿನಲ್ಲಿ ಭವನ ನಿರ್ಮಾಣ ಆಗಿದೆ. ನಮ್ಮಲ್ಲಿ ಹಣವಿದ್ದರೂ ಸೂಕ್ತ ಸ್ಥಳವಿಲ್ಲದೆ ವಿಳಂಬವಾಗಿದೆ. ಪ್ರತಿ ಬಾರಿ ವಾಲ್ಮೀಕಿ ಜಯಂತಿ ಆಚರಣೆ ಮುನ್ನ ಚರ್ಚೆ ಮಾಡಿದರೂ ಪ್ರಾಯೋಜವಾಗಿಲ್ಲ. ಈ ನಿಟ್ಟಿನಲ್ಲಿ ಪ್ರಸ್ತುತ ಜಯಂತಿ ಆಚರಣೆ ಮುನ್ನ ಸ್ಥಳ ನೀಡಬೇಕು. ಇಲ್ಲವಾದಲ್ಲಿ ವಾಲ್ಮೀಕಿ ಜಯಂತಿ ಸರ್ಕಾರಿ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂಬ ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ನಾಯಕ ಸಮಾಜದ ಕಾರ್ಯದರ್ಶಿ ರಾಮಚಂದ್ರಪ್ಪ ಮಾತನಾಡಿ ನಮ್ಮ ಬೇಡಿಕೆ ಮುಂದಿಟ್ಟರೆ ತೀವ್ರ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಸ್ಪಂದನೆಯ ಉತ್ತರ ನೀಡಲಿಲ್ಲ. ವಾಲ್ಮೀಕಿ ಭವನ ನಿರ್ಮಾಣಕ್ಕೆ ಕಳೆದ ಬಾರಿ ಎರಡು ಸ್ಥಳ ಗುರುತಿಸಿದ್ದ ತಹಶೀಲ್ದಾರ್ ಅವರು ಈಗ ಆ ಸ್ಥಳ ಬೇರೆಯವರಿಗೆ ಆಗಿದೆ ಎನ್ನುತ್ತಿದ್ದಾರೆ. ತುಳಿತಕ್ಕೆ ಒಳಗಾದ ನಮ್ಮ ವಾಲ್ಮೀಕಿ ಸಮಾಜ ತಾಲ್ಲೂಕಿನಲ್ಲಿ 30 ಸಾವಿರಕ್ಕೂ ಅಧಿಕ ಇದ್ದೇವೆ. ನಮಗೆ ಭವನದ ಅವಶ್ಯಕತೆ ಇದೆ. ಕೂಡಲೇ ಸೂಕ್ತ ಸ್ಥಳವನ್ನು ಜಯಂತಿ ಆಚರಣೆಗೆ ಮುನ್ನ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಗೌರವಾಧ್ಯಕ್ಷ ಎ.ನರಸಿಂಹಮೂರ್ತಿ, ಅಧ್ಯಕ್ಷ ಅಡವೀಶ್ ಕುಮಾರ್, ಸದಸ್ಯರಾದ ಲಕ್ಷ್ಮಣ್, ಡಿ.ದೇವರಾಜ್, ಕೃಷ್ಣಮೂರ್ತಿ, ರಾಜಣ್ಣ, ಲೋಕೇಶ್, ಕಲಾವಿದ ಲೋಕೇಶ್, ರಾಘವೇಂದ್ರ, ಜಿ.ಎಲ್.ರಂಗನಾಥ್, ಚೇತನ್ ನಾಯಕ್, ರಘು, ಮಂಜುನಾಥ್ ಇತರರು ಇದ್ದರು.