ಲಿಂಗಾಯಿತ ಧರ್ಮ ವಿಶ್ವದಲ್ಲಿ ಶ್ರೀಮಂತರ ಧರ್ಮವಾಗಿದೆ. ಹಾಗೆಯೇ ವಿಶ್ವವೇ ಒಪ್ಪಿದ ಧರ್ಮ ಎನಿಸಿದೆ ಎಂದು ಬೆಟ್ಟದಹಳ್ಳಿ ಗವಿಮಠದ ಅಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಗುಬ್ಬಿ ಪಟ್ಟಣದ ಹೊರವಲಯ ಹೇರೂರು ಗ್ರಾಮದ ಶ್ರೀ ಗುರು ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ತಾಲೂಕು ಘಟಕ ಹಾಗೂ ಶಿವ ಬಸವ ನೌಕರರ ಸೌಹಾರ್ದ ಸಹಕಾರ ಸಂಘ ಇವರ ಆಶ್ರಯದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಸಮಾವೇಶ, ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೀರಶೈವ ಹಾಗೂ ಲಿಂಗಾಯಿತ ಎರಡು ಒಂದೇ ಧರ್ಮವಾಗಿದೆ. ನಾವೆಲ್ಲರೂ ಸಹ ವೀರಶೈವ ಧರ್ಮವನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಸವಣ್ಣರು, ಬಸವಾದಿ ತತ್ವರು, ಬಸವಾದಿ ಶರಣರು ಈ ವೀರಶೈವ ಲಿಂಗಾಯಿತ ಧರ್ಮದಲ್ಲಿ ಇದ್ದಾರೆ. ಬಸವಣ್ಣನವರು 12 ನೇ ಶತಮಾನದಲ್ಲಿ ತೋರಿಸಿಕೊಟ್ಟ ಮಾರ್ಗ ಅನುಸರಿಸಬೇಕಿದೆ. ಮಠ ಮಾನ್ಯಗಳು ಸಮಾಜದಲ್ಲಿ ಮುಂದೆ ಬಂದು ಶಿಕ್ಷಣವನ್ನು ಕೊಡಿಸುವ ಜವಾಬ್ದಾರಿಯನ್ನು ಮಾಡುತ್ತಿದೆ ಎಂದು ತಿಳಿಸಿದರು.
ಗೊಲ್ಲಹಳ್ಳಿ ಮಠಾಧ್ಯಕ್ಷರಾದ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದ ಅವರು, ಮಕ್ಕಳ ವಿಧ್ಯಾಭ್ಯಾಸದ ಕಡೆ ಪೋಷಕರು ಹೆಚ್ಚು ಗಮನಕೊಡಿ. ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕು. ಮಕ್ಕಳು ಶಿಕ್ಷಣದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿದರೆ ಮಾತ್ರ ಸಮಾಜದಲ್ಲಿ ಉನ್ನತಸ್ಥಾನವನ್ನು ಗಳಿಸಲು ಸಾಧ್ಯವಾಗುತ್ತದೆ. ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನ ಆಸ್ತಿಯನ್ನಾಗಿ ಮಾಡಿದರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯೋಜನಾ ಮತ್ತು ಸಾಂಖ್ಯಿಕ ಸಚಿವರ ಆಪ್ತ ಕಾರ್ಯದರ್ಶಿ ಹೆಚ್.ಸಿ.ಸೋಮಶೇಖರ್ ಮಾತನಾಡಿ ಸಮಾಜದಲ್ಲಿ ಹೆಚ್ಚು ಶ್ರೀಮಂತರು ಇರುವುದರಿಂದ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಕೊಡುಗೆಯನ್ನು ನೀಡಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ ಬುದ್ಧಿವಂತಿಕೆಯಲ್ಲಿ ಎಲ್ಲಾ ಸಮಾಜದ ಮಕ್ಕಳಿದ್ದಾರೆ, ಆದ್ದರಿಂದ ವಿದ್ಯಾರ್ಥಿಗಳು ಓದುವ ಅಭ್ಯಾಸವನ್ನು ನಿರಂತರವಾಗಿ ಮಾಡುವ ಮೂಲಕ ಸಮಾಜದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಂಡು ಉತ್ತಮ ಸ್ಥಾನಮಾನ ಗಳಿಸಬೇಕು. ಮಕ್ಕಳು ಸಂಕುಚಿತ ಮನೋಭಾವವನ್ನು ಬಿಟ್ಟು ವಿಶಾಲವಾಗಿ ಯೋಚಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಮಕ್ಕಳು ಓದುವ ಸಮಯದಲ್ಲಿ ಓದಿದರೆ ಜೀವನದಲ್ಲಿ ಉತ್ತಮ ಜೀವನ ನಡೆಸಬಹುದು. ಒಂದು ವೇಳೆ ಓದುವ ಸಮಯದಲ್ಲಿ ಆಟವಾಡಿದರೆ ಜೀವನದಲ್ಲಿ ತುಂಬ ಕಷ್ಟ ಅನುಭವಿಸಬೇಕಾಗುತ್ತದೆ. ಯಾವುದೇ ವ್ಯಕ್ತಿ ಉನ್ನತ ಸ್ಥಾನಮಾನ ಗಳಿಸಿದರೂ ಸಹ ನಾನು ಬೆಳೆದ ಬಂದ ದಾರಿಯನ್ನು ಮರೆಯಬಾರದು. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬೆಳೆದರೆ ಅಹಂಕಾರ ಪಡಬಾರದು ಎಂದರು.
ನೊಳಂಬ ಲಿಂಗಾಯತ ಸಂಘದ ವೀರಶೈವ ಮಹಾಸಭಾದ ಕಾರ್ಯದರ್ಶಿ ಎಸ್.ಆರ್.ನಟರಾಜು ಮಾತನಾಡಿ ಮಠಮಾನ್ಯ ಇಲ್ಲದಿದ್ದರೆ ಶಿಕ್ಷಣಕ್ಕೆ ಕೊರತೆ ಆಗುತ್ತಿತ್ತು. ಕೆಳವರ್ಗದವರನ್ನು ಜೊತೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿರುವ ಸಮಾಜ ವೀರಶೈವ ಸಮಾಜ.
ಪ್ರತಿಭಾನ್ವಿತ ಮಕ್ಕಳು ಗೌರವ ಪುರಸ್ಕಾರ ಪಡೆದ ನಂತರ ಯಾವುದೇ ಪ್ರತಿಫಲ ಅಪೇಕ್ಷೆ ಪಡೆದೆ ಮರಳಿ ಸಮಾಜಕ್ಕೆ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಮುಂದಾಗಬೇಕು. ನಮ್ಮ ಸಮಾಜದ ವತಿಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ಸೌಲಭ್ಯವನ್ನು ಮಾಡುವಲ್ಲಿ ಸಂಘಟನೆಗಳು ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ನೌಕರರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಸಿ.ಪ್ರಭಾಕರ್, ಎ.ಎನ್.ವಿಶ್ವಾರಾಧ್ಯ, ಬಿ.ಜಿ.ದಿವ್ಯಪ್ರಕಾಶ್, ಹೆಚ್.ಸಿ.ಯತೀಶ್, ಪಿ.ಆರ್.ಚನ್ನಬಸವಯ್ಯ, ಎನ್.ಆರ್.ನಿಜಗುಣಪ್ಪ, ಎಸ್.ಮಂಜುನಾಥ್ ಹಾಗೂ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿ,
ಶಿವಬಸವ ನೌಕರರ ಸೌಹಾರ್ದ ಸಹಕಾರಿ ನಿಯಮಿತದ ಪದಾಧಿಕಾರಿಗಳು, ನಿವೃತ್ತ ನೌಕರರು ಪ್ರತಿಭಾನ್ವಿತ ಮಕ್ಕಳು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.