ದೇಶದ ಪ್ರಜೆಗಳಿಗೆ ಅನ್ನ ನೀಡುವ ರೈತನ ಸ್ಮರಣೆಗೆ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತ ದಿನಾಚರಣೆ (ಕಿಸಾನ್ ದಿವಸ್) ಘೋಷಣೆ ಮಾಡಿರುವ ಸರ್ಕಾರ ರೈತರ ದಿನವನ್ನು ಹಬ್ಬವಾಗಿ ಸಾರ್ವಜನಿಕರ ಮಧ್ಯೆ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಆಗ್ರಹಿಸಿದರು.
ಗುಬ್ಬಿ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಭಾರತದ ಐದನೇ ಪ್ರಧಾನ ಮಂತ್ರಿಯಾದ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.

ಭಾರತದ ಆರ್ಥಿಕತೆಯ ಬೆನ್ನೆಲುಬು ಮತ್ತು ಗ್ರಾಮೀಣ ಸಮೃದ್ಧಿಗೆ ಗಮನಾರ್ಹ ಕೊಡುಗೆ ನೀಡುವವರು ರೈತರು. ದೇಶದ ಶೇಕಡಾ 70 ರಷ್ಟು ದುಡಿಯುವ ರೈತರು ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಎಲ್ಲಾ ಜವಾಬ್ದಾರಿಯುತ ರೈತರನ್ನು ಗೌರವಿಸಲು ಮತ್ತು ಪ್ರಶಂಸಿಸಲು, ಪ್ರತಿ ವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಆದರೆ ಕೇವಲ ಕೃಷಿ ಇಲಾಖೆಗೆ ಸೀಮಿತಗೊಳಿಸಿ ಕಚೇರಿ ಮಟ್ಟಕ್ಕೆ ಒಂದು ಸಣ್ಣ ಕಾರ್ಯಕ್ರಮ ನಡೆದು ಮುಗಿಯುತ್ತದೆ. ರೈತರ ಕೊಡುಗೆ ಅಪರಿಮಿತ ಎನ್ನುವುದಾದರೆ ದೇಶದಲ್ಲಿ ಹಬ್ಬವಾಗಿಸಿ ಸಾರ್ವಜನಿಕ ಮಧ್ಯೆ ಸರ್ಕಾರಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಿ ಅತ್ಯುತ್ತಮ ರೈತರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.
