ಮಹತ್ವಾಕಾಂಕ್ಷೆಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾದ ನಾಲ್ಕು ಲಕ್ಷದ ಕಾಮಗಾರಿಯನ್ನು ನಿರ್ವಹಿಸದೆ, ಬಿಡುಗಡೆಯಾದ ಹಣ ಗುಳುಂ ಮಾಡಿರುವ ಪ್ರಕರಣ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬೆಲವತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
2023-24 ನೇ ಸಾಲಿನ ಮನರೇಗಾ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಶಾಲಾ ಕಾಂಪೌಂಡ್, ಆಟದ ಮೈದಾನ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒಟ್ಟು ಆರು ಲಕ್ಷದ ಅಂದಾಜು ಪಟ್ಟಿ ಸಿದ್ಧಪಡಿಸಿ ಅದರಲ್ಲಿ ಮಂಜೂರಾದ ನಾಲ್ಕು ಲಕ್ಷದ ಕಾಮಗಾರಿಗೆ ಎಂಎಂಎಸ್, ಜಿಪಿಎಸ್ ಮಾಡಿಲ್ಲ, ಸ್ಥಳೀಯ ಗ್ರಾಪಂ ಸದಸ್ಯರಿಗೆ ತಿಳಿದಿಲ್ಲ, ಪಿಡಿಓ ಸ್ಥಳಕ್ಕೆ ಬಂದಿಲ್ಲ, ಸಂಬಂಧಪಟ್ಟ ಇಂಜಿನಿಯರ್ ಸ್ಥಳಕ್ಕೆ ಬಂದೇ ಇಲ್ಲ, ಅಂದಾಜು ಪಟ್ಟಿಗೆ ಅಧಿಕಾರಿಗಳ ಸಹಿ ಆಗಿಲ್ಲ ಇಷ್ಟೆಲ್ಲದರ ಮಧ್ಯೆ ಕೆಲಸವೇ ನಡೆಯದೇ ಜಾಬ್ ಕಾರ್ಡ್ ದಾರರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ಗುಳುಂ ಮಾಡಿದ ಪ್ರಕರಣ ಹಾರನಹಳ್ಳಿ ಗ್ರಾಮಸ್ಥರಿಗೆ ಆಕ್ರೋಶ ಮೂಡಿಸಿದೆ.
ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲಾಭಿವೃದ್ಧಿ ಅತ್ಯಗತ್ಯ ಆಗಬೇಕಿದೆ. ಈ ಹಿನ್ನಲೆ ಬೆಲವತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದ ಶಾಲೆಗೆ ಆಟದ ಮೈದಾನ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾ ಯೋಜನೆಯ ಎಲ್ಲಾ ದಾಖಲೆ ಪ್ರಕ್ರಿಯೆ ಮುಗಿಸಿ ರಜೆ ದಿನ ಶಾಲೆಯ ಆವರಣದಲ್ಲಿ ಗೋಡೆ ಬರಹವನ್ನು ಬಣ್ಣ ಬಣ್ಣವಾಗಿ ಬರೆದು ಕಾಮಗಾರಿ ಮಾಡಲಾಗಿದೆ ಎಂದು ಬಿಂಬಿಸಲಾಗಿದೆ. ಈ ಗೋಡೆ ಬರಹವನ್ನು ಕಂಡ ಶಾಲಾ ಶಿಕ್ಷಕರಿಗೂ ಅಚ್ಚರಿ ತಂದಿದೆ.
ಸ್ಥಳೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗೆ ಶಾಕ್ ನೀಡಿದೆ. ಈ ಯೋಜನೆಯ ಫಲಕ ತಿಳಿಸಿದಂತೆ ಇದು ವ್ಯವಸ್ಥಿತ ರೀತಿ ಅಕ್ರಮ ಮಾಡಲಾಗಿದೆ. ಈ ಕಾಮಗಾರಿ ಬಗ್ಗೆ ಪಿಡಿಓ ಕವಿತಾ ಅವರನ್ನು ಕೇಳಿದಾಗ ಅನಿವಾರ್ಯ ನಡೆದಿದೆ ಬಿಡಿ ಎನ್ನುವ ಹಾರಿಕೆ ಉತ್ತರ ನೀಡಿದರು. ಸಂಬಂಧಪಟ್ಟ ಇಂಜಿನಿಯರ್ ಗೋವಿಂದರಾಜು ಅವರನ್ನು ವಿಚಾರಿಸಿದಾಗ ಅವರು ಸಹ ಕೆಲಸ ಮಾಡುತ್ತಾರೆ ಬಿಡಿ ಎನ್ನುವ ಉಡಾಫೆ ಮಾತು ಹೇಳಿದ್ದಾರೆ. ಈ ಹಣ ಹೊಡೆಯಲು ಅಧಿಕಾರಿಗಳೇ ಭ್ರಷ್ಟಾಚಾರವೆಸಗಿದ್ದಾರೆ ಎಂದು ಸ್ಥಳೀಯ ಗ್ರಾಪಂ ಸದಸ್ಯ ಪ್ರದೀಪ್ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಬದುಕಿಗೆ ಅಧಾರವಾಗಬೇಕು. ಆದರೆ ಅದನ್ನೇ ದುರುಪಯೋಗ ಮಾಡಿಕೊಂಡು ಅನುಷ್ಠಾನ ಮಾಡಬೇಕಾದ ಅಧಿಕಾರಿಗಳೇ ಹಣ ಗುಳುಂ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯ ಗ್ರಾಪಂ ಸದಸ್ಯರಾದ ಪ್ರದೀಪ್, ವೆಂಕಟೇಶ್, ಭೀಮೇಶ್, ಎನ್.ಬಿ.ರಾಜಶೇಖರ್, ಮುಖಂಡರಾದ ಮುನಿಯಪ್ಪ, ಓಂಕಾರ್ ಇತರರು ಪ್ರಶ್ನಿಸಿದ್ದಾರೆ.

ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಬದುಕು ಕಟ್ಟಿಕೊಡುವ ನರೇಗಾ ಯೋಜನೆಯ ಹಣವನ್ನು ನುಂಗುವುದು ಸರಿಯಲ್ಲ.
ಹಾರನಹಳ್ಳಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವ ಸ್ಥಳೀಯ ಯಾವುದೇ ಮುಖಂಡರ ಗಮನಕ್ಕೆ ಬಾರದೆ ಶಾಲಾಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಕೆಲಸ ಮಾಡದೆ ಹಣ ಹೊಡೆದಿರುವುದು ತಿಳಿದು ಅಧಿಕಾರಿಗಳ ಮಿತಿ ಮೀರಿದ ಭ್ರಷ್ಟಾಚಾರ ಅಸಹ್ಯ ಹುಟ್ಟಿಸಿದೆ. ಬೋಗಸ್ ಬಿಲ್ ಬೆಲವತ್ತ ಗ್ರಾಮ ಪಂಚಾಯಿತಿಗೆ ಅವಮಾನ ಉಂಟು ಮಾಡಿದೆ. ಕೆಲಸ ಮಾಡದೆ ಜಾಬ್ ಕಾರ್ಡ್ ದಾರರ ಖಾತೆಗೆ 88 ಸಾವಿರ ಹಣ ವರ್ಗಾವಣೆ ಆಗಿರುವುದು ಜೊತೆಗೆ ಇಂಜಿನಿಯರ್ ಪಿಡಿಓ ಒಗ್ಗೂಡಿ ಅವರಿಗೆ ಬೇಕಾದ ಚೇಳೂರು ಭಾಗದ ಗುತ್ತಿಗೆದಾರರೊಬ್ಬರಿಗೆ ಕೆಲಸ ನೀಡಿ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ ಹೇಳಿದ್ದಾರೆ.
ವರದಿ: ಎಸ್. ಕೆ. ರಾಘವೇಂದ್ರ ಗುಬ್ಬಿ
