ಅಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿರುವ ಕಾರಣ ಕೃಷಿಕ ವರ್ಗ ಬೇಸತ್ತಿದೆ. ನಿಗದಿತ ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ ಕೃಷಿಕ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಕೇಂದ್ರ ಸರ್ಕಾರದ ನಿರ್ಧಾರ ಕೈಬಿಡುವಂತೆ ಆಗ್ರಹಿಸಿ ರೈತ ಸಂಘ ಗುಬ್ಬಿ ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ಫೆ.24 ರಂದು ನಡೆಸಲಿದೆ. ತಾಲ್ಲೂಕಿನ ಎಲ್ಲಾ ರೈತರು ಆಗಮಿಸಲು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಗುಬ್ಬಿ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಿ ಮೀಟರ್ ಅಳವಡಿಸುವ ಚಿಂತನೆ ಸರಿಯಲ್ಲ. ಇತ್ತ ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ಏಳು ಗಂಟೆ ತ್ರೀ ಫೇಸ್ ಕರೆಂಟ್ ಕೊಡುವ ಮಾತು ಹುಸಿಯಾಗಿದೆ. ದಿನಕ್ಕೆ ಒಂದು ತಾಸು ಕೂಡಾ ಕೊಟ್ಟಿಲ್ಲ. ರೈತರು ಹೈರಾಣಾಗಿದ್ದಾರೆ ಎಂದು ತಿಳಿಸಿದರು.
ಬೇಸಿಗೆ ಆರಂಭದಲ್ಲೇ ಕರೆಂಟ್ ಸಮಸ್ಯೆ ತಲೆದೋರಿರುವುದು ಕೃಷಿಕ ವರ್ಗಕ್ಕೆ ತೀವ್ರ ಆಘಾತ ತಂದಿದೆ. ಅಡಿಕೆ ತೆಂಗು ಬೆಳೆಗಾರರ ಸಂಕಷ್ಟ ಹೇಳುವಂತಿಲ್ಲ. ಇರುವ ಬೋರ್ ವೆಲ್ ನಲ್ಲಿ ಅಲ್ಪ ನೀರು ಬಳಸಿ ಗಿಡಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಾ ಇರುವ ವೇಳೆಗೆ ಕರೆಂಟ್ ಕೈ ಕೊಟ್ಟಿದೆ. ದಿನಕ್ಕೆ ಒಂದು ತಾಸು ತ್ರೀ ಫೇಸ್ ಕರೆಂಟ್ ಸಿಗುತ್ತಿಲ್ಲ. ಈ ಸಮಸ್ಯೆ ಜೊತೆ ಸಿಂಗಲ್ ಫೇಸ್ ಕರೆಂಟ್ ಕೂಡಾ ನೀಡುತ್ತಿಲ್ಲ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳ ಪಾಡು ಹೇಳತೀರದು. ಇಷ್ಟೆಲ್ಲಾ ಸಮಸ್ಯೆ ಕೇಳೋಣ ಅಂದ್ರೆ ಬೆಸ್ಕಾಂ ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಪೋನ್ ಕರೆ ಮಾಡಿದರೆ ಪಿಕ್ ಮಾಡೋಲ್ಲ. ನಾಲ್ಕೈದು ಬಾರಿ ಕರೆ ಮಾಡಿದರೆ ಪೋನ್ ಆಫ್ ಆಗುತ್ತದೆ ಎಂದು ಕಿಡಿಕಾರಿದರು.
ಇಷ್ಟೆಲ್ಲಾ ಸಮಸ್ಯೆಗೆ ಉತ್ತರ ನೀಡಬೇಕಾದ ಸರ್ಕಾರ ಜಾಣ ಮೌನ ವಹಿಸಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸಲು ಬೃಹತ್ ರೈತರ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಇಲಾಖೆಯ ಎಸ್ಇ, ಇಇ ಹಾಗೂ ಎಇಇ ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ಕೊಡುವವರೆವಿಗೂ ಪ್ರತಿಭಟನೆ ಮುಗಿಸುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ತಿಳಿಸಲಾಗಿದೆ. ತಾಲ್ಲೂಕಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ಉತ್ತರ ಸಿಗುವವರೆಗೂ ಹೋರಾಟದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
