ಕಳೆದ 40 ವರ್ಷದಿಂದ ನಿರಂತರ ರೈತ ಪರ ಹೋರಾಟ ನಡೆಸಿದ ರೈತ ಸಂಘವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರೈತ ಸಂಘದ ಸಂಸ್ಥಾಪಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮ ದಿನವಾದ ಫೆ.13 ರಿಂದ ರೈತ ಸಂಘದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಗುಬ್ಬಿ ಪಟ್ಟಣದ ಬಾಬು ಜಗಜೀವನರಾಂ ಭವನದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು ಗುಬ್ಬಿ ತಾಲ್ಲೂಕಿನಲ್ಲಿ ಕನಿಷ್ಠ 2 ಸಾವಿರ ಮಂದಿ ರೈತರನ್ನು ನೋಂದಣಿ ಮಾಡಿಸಲಾಗುವುದು. ಇದೇ ತಿಂಗಳ 15 ರಂದು ಕಸಬ ಹೋಬಳಿ, 16 ರಂದು ಚೇಳೂರು, 18 ರಂದು ಕಡಬ, ಸಿ.ಎಸ್.ಪುರ, 19 ರಂದು ನಿಟ್ಟೂರು, 21 ರಂದು ಹಾಗಲವಾಡಿ ಹೀಗೆ ಅಭಿಯಾನ ನಡೆಯಲಿದೆ ಎಂದು ವಿವರಿಸಿದರು.
ರಾಜ್ಯದ 26826 ಹಳ್ಳಿಗಳಲ್ಲಿ ರೈತ ಸಂಘ ಕೆಲಸ ಮಾಡುತ್ತಿದೆ. ಮತ್ತಷ್ಟು ಶಕ್ತಿಯುತವಾಗಿ ಸಂಘ ಬೆಳೆಸಿ ನಮ್ಮ ಹಕ್ಕು ಪ್ರತಿಪಾದಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮ ದಿನದಂದು ಮೈಸೂರಿನಲ್ಲಿ ರೈತ ಸಮಾವೇಶ ನಡೆಸಿ ನಮ್ಮ ಹಕ್ಕು ಪ್ರತಿಪಾದಿಸುವ ಕಾರ್ಯಗಾರ ನಡೆಸಲಾಗುವುದು ಎಂದ ಅವರು ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಕದ್ದುಮುಚ್ಚಿ ನಡೆಸುವ ಕೆಲಸ ಸರ್ಕಾರ ಮಾಡುತ್ತಿದೆ. ಈಗಾಗಲೇ ಸರ್ಕಾರಿ ಜಾಗದಲ್ಲಿ ಕೆಲಸ ನಡೆಸಿದ್ದಾರೆ. ಆದರೆ ರೈತರು ಜಮೀನು ಬಿಟ್ಟಿಲ್ಲ. ಈ ಹೋರಾಟಕ್ಕೆ ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರು ದನಿಯಾಗಿ ನಿಂತು ರೈತಪರ ಮಾತನಾಡಿ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಕಣ್ಣಾಮುಚ್ಚಾಲೆ ಈಗಲೇ ಬೇಸಿಗೆಗೆ ಮುನ್ನ ಶುರುವಾಗಿದೆ. ರೈತರಿಗೆ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿಲ್ಲ. ಕನಿಷ್ಠ 7 ಗಂಟೆ ನೀಡಬೇಕಾದ ಕರೆಂಟ್ ನೀಡದೆ ರೈತರಿಗೆ ತೊಂದರೆ ನೀಡಿದ್ದಾರೆ. ತ್ರೀ ಫೇಸ್ ಕರೆಂಟ್ ನೀಡುವಲ್ಲಿ ವಿಫಲವಾದ ಸರ್ಕಾರ ತೋಟದ ಮನೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಸಮರ್ಪಕ ವಿದ್ಯುತ್ ಸರಬರಾಜು, ನಿಗದಿತ ಸಮಯದಲ್ಲಿ ಕರೆಂಟ್ ನೀಡುವಂತೆ ಆಗ್ರಹಿಸಿ ಗುಬ್ಬಿ ಬೆಸ್ಕಾಂ ಕಚೇರಿ ಮುಂದೆ ಇದೇ ತಿಂಗಳ 24 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಬಗರ್ ಹುಕುಂ ಯೋಜನೆಯಡಿ ಅರ್ಹ ರೈತರಿಗೆ ಜಮೀನು ನೀಡದೆ ಅರ್ಜಿ ಹಾಕಿ ಕಾದು ಕುಳಿತ ರೈತರಿಗೆ ಶಾಕ್ ನೀಡಿದ ಸರ್ಕಾರ ಶೇಕಡಾ 75 ರಷ್ಟು ಅರ್ಜಿಗಳನ್ನು ವಜಾಗೊಳಿಸಿದೆ. ಇದು ಅನುಭವದಲ್ಲಿರುವ ರೈತರಿಗೆ ಅನ್ಯಾಯ ಆಗಿದೆ. ಸ್ವಾಧೀನ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಸರಿಯಲ್ಲ ಎಂದು ಎಚ್ಚರಿಸಿದ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಆರು ಲಕ್ಷ ಕೋಟಿ ರೈತರ ಸಾಲ ಮನ್ನಕ್ಕೆ ಆಗ್ರಹಿಸಿದರೆ ಕಾರ್ಪೊರೇಟರ್ ಕಂಪೆನಿಯ ಅರವತ್ತು ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಈ ಜೊತೆಗೆ ರೈತರ ಕೊಳವೆಬಾವಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ಮಾಡಲು ಮುಂದಾಗಿರುವುದು ಸರಿಯಲ್ಲ. ಈ ಸಂಕಟದಿಂದ 26 ನಿಮಿಷಕ್ಕೆ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಯುವ ಘಟಕ ಅಧ್ಯಕ್ಷ ಜಗದೀಶ್, ಮುಖಂಡರಾದ ಯತೀಶ್, ಕೃಷ್ಣಯ್ಯ ಶೆಟ್ಟಿ, ರವೀಶ್, ಮಹದೇವಯ್ಯ, ಸಿ.ಟಿ.ಕುಮಾರ್, ಮಂಜುನಾಥ್, ಗುರುಚನ್ನಬಸವಯ್ಯ ಇತರರು ಇದ್ದರು.
