ಮೈಕ್ರೋ ಫೈನಾನ್ಸ್ ಸಾಲ ನೀಡಿ ನಂತರ ವಸೂಲಾತಿಗೆ ತೀವ್ರ ದುರ್ವರ್ತನೆ ತೋರುತ್ತಾರೆ. ಮನೆಯ ಬಳಿ ಸಾಲಗಾರರಿಗೆ ಅವಮಾನ ಮಾಡುವುದು, ಮನೆ ಸೀಜ್ ಮಾಡುವುದು ಜತೆಗೆ ಲಾಯರ್ ನೋಟೀಸ್, ಗೂಂಡಾವರ್ತನೆ ಮೂಲಕ ಬಡ್ಡಿ ವಸೂಲಿ, ನಾನಾ ಕಾರಣ ನೀಡಿ ಮೀಟರ್ ಬಡ್ಡಿ ವಸೂಲಿ ಹೀಗೆ ಹತ್ತು ಹಲವು ವಿಚಾರ ಪ್ರಸ್ತಾಪಿಸಿದ ಸ್ಥಳೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು ವಸೂಲಾತಿ ರೀತಿ ಸರಿ ಪಡಿಸಿಕೊಂಡು ವ್ಯವಹರಿಸಲು ಆಗ್ರಹಿಸಿದರು.
ಗುಬ್ಬಿ ಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಬಿ.ಆರತಿ ಹಾಗೂ ಡಿವೈಎಸ್ಪಿ ಶೇಖರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಜರಿದ್ದು ಸರ್ಕಾರ ವಿಧಿಸಿರುವ ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ನಿಯಮಗಳನ್ನು ಚರ್ಚಿಸಿದರು.
ಫೈನಾನ್ಸ್ ಸಿಬ್ಬಂದಿಗಳ ಕಾಟಕ್ಕೆ ರೋಸು ಹೋದ ಹಲವು ಪ್ರಕರಣಗಳನ್ನು ಸಭೆಯಲ್ಲಿ ಚರ್ಚಿಸಿದ ಮುಖಂಡರು ಸಾಲ ವಸೂಲಿ ಮಾಡುವ ಸಿಬ್ಬಂದಿಗಳೇ ಹಣ ಲಪಟಾಯಿಸಿದ ಪ್ರಕರಣ, ಸಾಲ ಪಡೆದಾತ ಮೃತಪಟ್ಟು ಒಂದು ವಾರದಲ್ಲೇ ಮನೆಯನ್ನು ಸೀಜ್ ಮಾಡುವುದು, ಮನೆ ಬಾಗಿಲಲ್ಲಿ ಅವಾಚ್ಯ ಶಬ್ದಗಳಿಂದ ಬೈದ ಘಟನೆ, ರಾತ್ರಿ ವೇಳೆ ಬಾಗಿಲು ತಟ್ಟುವ ಬಗ್ಗೆ ಕಿಡಿಕಾರಿ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸ್ಥಳೀಯ ಹುಡುಗರಿಗೆ ಉದ್ಯೋಗ ನೀಡಿ ಅವರಿಂದಲೇ ಗ್ರಾಹಕರಿಗೆ ನಿಂದನೆ ಮಾಡಿಸುವ ಮೈಕ್ರೋ ಫೈನಾನ್ಸ್ ವ್ಯವಸ್ಥಿತ ಲೂಟಿಕೋರರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಸ್ಪಿ ಶೇಖರ್ ಮಾತನಾಡಿ ಸಾಲ ವಸೂಲಿಗೆ ಬರುವ ಸಿಬ್ಬಂದಿಗಳ ವರ್ತನೆ ಸರಿ ಇರಬೇಕು. ಫೈನಾನ್ಸ್ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವ ವೇಳೆ ಆತನ ಹಿನ್ನಲೆ ತಿಳಿಯಬೇಕು. ನಡತೆ ಬಗ್ಗೆ ಪೊಲೀಸ್ ಹಿನ್ನಲೆ ಕೂಡಾ ಪರಿಶೀಲಿಸಬೇಕು. ರೌಡಿ ಚಟುವಟಿಕೆಯ ವ್ಯಕ್ತಿಗಳಿಗೆ ಕೆಲಸ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಲ್ಲಿ ಫೈನಾನ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಟಾರ್ಚರ್ ನೀಡಿದ ದೂರುಗಳು ಬರುತ್ತಿವೆ. ಸರ್ಕಾರ ಸೂಚಿಸಿದಂತೆ ಸಿಬ್ಬಂದಿಗಳ ವರ್ತನೆ ಬಗ್ಗೆ ದೂರು ಬಾರದಂತೆ ಎಚ್ಚರಿಕೆ ವಹಿಸಲು ತಿಳಿಸಿದರು.
ತಹಶೀಲ್ದಾರ್ ಬಿ.ಆರತಿ ಮಾತನಾಡಿ ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ಬಗ್ಗೆ ಸರ್ಕಾರ ನಿಯಮಗಳನ್ನು ಸೂಚಿಸಿದೆ. ಅದರಂತೆ ನಡೆದುಕೊಂಡು ಸಾಲ ವಸೂಲಿ ಮಾಡಬೇಕಿದೆ. ಬೆಳಿಗ್ಗೆ 6 ರಿಂದ ಸಂಜೆ 6 ರೊಳಗೆ ಮಾತ್ರ ವಸೂಲಿ ಕೆಲಸ ಮಾಡಬೇಕಿದೆ. ಗ್ರಾಹಕರ ಬಳಿ ಸರಿಯಾದ ವರ್ತನೆಯಲ್ಲಿ ಹಣ ಕೇಳಬೇಕಿದೆ. ಮನಬಂದಂತೆ ಮಾತುಗಳು, ಅವಾಚ್ಯ ಶಬ್ದಗಳಿಂದ ನಿಂದನೆ, ವಸ್ತುಗಳ ಸೀಜ್, ಹರಾಜು ಪ್ರಕ್ರಿಯೆ ಹೀಗೆ ಮಾನಸಿಕ ಹಿಂಸೆ ನೀಡಿದಲ್ಲಿ ಕಾನೂನು ಕ್ರಮಕ್ಕೆ ಸರ್ಕಾರ ಸೂಚಿಸಿದೆ ಎಂದು ನಿಯಮಾವಳಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ಶಿವಪ್ರಕಾಶ್, ಸಿಪಿಐ ಗೋಪಿನಾಥ್, ಗುಬ್ಬಿ ಪಿಎಸ್ಐ ಸುನೀಲ್ ಕುಮಾರ್, ಸಿ.ಎಸ್.ಪುರ ಪಿಎಸ್ಐ ಶಿವಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಮುಖಂಡರಾದ ಎಚ್.ಟಿ.ಭೈರಪ್ಪ, ಸಿ.ಆರ್.ಶಂಕರ್ ಕುಮಾರ್, ಬಿ.ಲೋಕೇಶ್, ಜಿ.ಆರ್.ರಮೇಶ, ಡಿ.ರಘು, ಜಿ.ವಿ.ಮಂಜುನಾಥ್ ಇತರರು ಇದ್ದರು.